ಧ್ರುವ ಸರ್ಜಾ ಇತ್ತೀಚೆಗೆ ಬಳ್ಳಾರಿಯಿಂದ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಅವರ ಕಾರು ಆಕ್ಸಿಡೆಂಟ್ ಆಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಧ್ರುವ ಸರ್ಜಾ ಅಪಘಾತದಿಂದ ಪಾರಾಗಿದ್ದರು. ಅಪಘಾತವಾದ ನಂತರ ನಟ ಧ್ರುವ ಸರ್ಜಾ ಬಳ್ಳಾರಿ ಅಧಿದೇವತೆ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ಶಕ್ತಿ ದೇವತೆ ಆಶೀರ್ವಾದ ಪಡೆದಿದ್ದರು.
ಅಲ್ಲದೆ ಗಂಗಾವತಿ ಐತಿಹಾಸಿಕ ಬೆಟ್ಟವಾದ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಆಂಜನೇಯನ ದರ್ಶನವನ್ನು ಪಡೆದಿದ್ದರು. ವಿಶೇಷ ಅಂದ್ರೆ ಧ್ರುವ ಸರ್ಜಾ ಅಂಜನಾದ್ರಿ ಬೆಟ್ಟದ ಸುಮಾರು 575 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಏರಿ ಭಜರಂಗಿ ದರ್ಶನ ಪಡೆದಿದ್ದರು.
ಐತಿಹಾಸಿಕ ಬೆಟ್ಟದ ಆಂಜನೇಯನ ಸನ್ನಿಧಿಗೆ ಭೇಟಿ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಧ್ರುವ ಸರ್ಜಾ, ಅಂಜನಾದ್ರಿ ಬೆಟ್ಟ ವಾತಾವರಣ ತುಂಬಾ ಪ್ರಶಾಂತವಾಗಿದೆ, ಮೊದಲ ಬಾರಿಗೆ ನಾನು ನಮ್ಮ ಬಾಸ್ನ ನೋಡೋದಕ್ಕೆ ಇಲ್ಲಿಗೆ ಬಂದಿದ್ದೇನೆ. ಅಲ್ಲದೇ ಸುಮಾರು 575 ಹೆಚ್ಚು ಮೆಟ್ಟಿಲುಗಳನ್ನು ಏರಿ ಬಂದಿದ್ದೇನೆ ಎನ್ನುವುದು ನನಗೆ ಗೊತ್ತಾಗಲಿಲ್ಲ. ನನ್ನ ಬಾಸ್ ಆಂಜನೇಯನ ದರ್ಶನ ಪಡೆಯಲಿಕ್ಕೆ ಐನೂರಲ್ಲ ಸಾವಿರ ಮೆಟ್ಟಿಲು ಇದ್ದರು ಏರಿ ಬರುವುದಾಗಿ ಹೇಳಿದ್ದಾರೆ.
ಸರ್ಜಾ ಫ್ಯಾಮಿಲಿ ಭಜರಂಗಿ ಭಕ್ತರಾಗಿದ್ದು ಅರ್ಜುನ್ ಸರ್ಜಾ ಕೂಡ ಚೆನ್ನೈನಲ್ಲಿ ಬೃಹದಾಕಾರದ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಕೂಡ ಆಂಜನೇಯನ ಪರಮ ಭಕ್ತನಾಗಿದ್ದು, ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥವನ್ನು ಆಂಜನೇಯನ ಸನ್ನಿಧಿಯಲ್ಲಿ ಮಾಡಿಕೊಂಡಿದ್ದರು ಎಂಬುದು ವಿಶೇಷವಾಗಿದೆ. ಮುಂದಿನ ತಿಂಗಳು ಧ್ರುವ ಮದುವೆಯಾಗುತ್ತಿದ್ದು, ವಿವಾಹವನ್ನು ಮಾರುತಿ ಸನ್ನಿಧಿಯಲ್ಲಿ ಆಗಲು ನಿರ್ಧಾರ ಮಾಡಿದ್ದಾರೆ.