ಸ್ಯಾಂಡಲ್ ವುಡ್ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಕಾಲಿಕ ಮರಣ, ಕುಟುಂಬಕ್ಕೆ ಹಾಗೂ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಮುದ್ದಿನ ಮಗನ ಕಳೆದು ಕೊಂಡ ಸರ್ಜಾ ಕುಟುಂಬ ನೋವು ಹೇಳತೀರದು. ಅಲ್ಲದೆ ರಾಮನಂತಿದ್ದ ಅಣ್ಣನನ್ನು ಕಳೆದುಕೊಂಡ ಧ್ರುವ ಸರ್ಜಾ ಅವರ ನೋವು ಪದಕ್ಕೆ ಸಿಲುಕದು.
ಆದರೆ ನೋವಿನ ನಡೆವೆಯು ಧ್ರುವ ಸರ್ಜಾ, ಅಣ್ಣ ಚಿರಂಜೀವಿ ಸರ್ಜಾ ಅವರನ್ನು ನಂಬಿ ಬಂಡವಾಳ ಹೂಡಿದ್ದ ನಿರ್ಮಾಪಕರ ನೆರವಿಗೆ ಬಂದಿದ್ದಾರೆ. ಚಿರು ಸಾವಿನಿಂದ ಸಾಕಷ್ಟು ಚಿತ್ರಗಳಿಗೆ ಸಮಸ್ಯೆ ಆಗಿದೆ. ಅದರಲ್ಲಿ 'ರಾಜ ಮಾರ್ತಾಂಡ' ಚಿತ್ರ ಕೂಡ ಒಂದು.
![The movie 'Raja Marthanda'](https://etvbharatimages.akamaized.net/etvbharat/prod-images/7784742_thumbna.jpg)
ಈಗಾಗಲೇ ಶೂಟಿಂಗ್ ಮುಗಿಸಿ ಮಾತಿನ ಮನೆ ಸೇರಿದ್ದ 'ರಾಜ ಮಾರ್ತಾಂಡ' ಚಿತ್ರಕ್ಕೆ ಕೊರೊನಾ ಲಾಕ್ ಡೌನ್ ಎಫೆಕ್ಟ್ನಿಂದ ಡಬ್ಬಿಂಗ್ ಕೆಲಸ ಅರ್ಧಕ್ಕೆ ನಿಂತಿತ್ತು. ಅಲ್ಲದೆ ಲಾಕ್ಡೌನ್ ನಂತರ ಚಿತ್ರಕ್ಕೆ ಡಬ್ ಮಾಡುವುದಾಗಿ ಚಿರು ಹೇಳಿದ್ದರು. ಆದ್ರೆ ಅಷ್ಟರಲ್ಲಿ ಚಿರು ಚಿರನಿದ್ರೆಗೆ ಜಾರಿದ್ದು, ಅಣ್ಣ ಅಭಿನಯದ ಚಿತ್ರಗಳು ಅರ್ಧಕ್ಕೆ ನಿಲ್ಲಬಾರದು ಎಂದು ಧ್ರುವ ಸರ್ಜಾ ಧೃಡ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಿರು ಆಭಿನಯದ 'ರಾಜ ಮಾರ್ತಾಂಡ' ಚಿತ್ರಕ್ಕೆ ಈಗ ಧ್ರುವ ಸರ್ಜಾ ಡಬ್ಬಿಂಗ್ ಮಾಡಿ ಕೊಡುವುದಾಗಿ ಚಿತ್ರ ತಂಡಕ್ಕೆ ತಿಳಿಸಿ ಅಣ್ಣನಿಗೆ ಧ್ವನಿಯಾಗಿದ್ದಾರೆ. ಈ ವಿಷಯವನ್ನು ರಾಜಾ ಮಾರ್ತಾಂಡ ಚಿತ್ರದ ನಿರ್ದೇಶಕ ರಾಮ್ ನಾರಾಯಣ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ. ರಾಜಮಾರ್ತಾಂಡ ಚಿತ್ರದ ಚಿರು ಪಾತ್ರಕ್ಕೆ ಧ್ರುವ ಡಬ್ಬಿಂಗ್ ಮಾಡ್ತಾರೆ. ಅಲ್ಲದೆ ಖುಷಿಯ ವಿಷಯ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ನಿರ್ಮಾಪಕರಿಗೆ ಕಾಲ್ ಮಾಡಿ ಚಿರು ಪಾತ್ರಕ್ಕೆ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದಾರೆ.
![The movie 'Raja Marthanda'](https://etvbharatimages.akamaized.net/etvbharat/prod-images/7784742_thum.jpg)
ಇದು ಚಿರು ಹಾಗೂ ದರ್ಶನ್ ಅವರ ನಡುವೆ ಇದ್ದ ಸ್ನೇಹಕ್ಕೆ ಸಾಕ್ಷಿಯಾಗಿದೆ. ಸದ್ಯ ಚಿತ್ರದ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಲಿದ್ದು, ದರ್ಶನ್ ಅವರ ಧ್ವನಿಯನ್ನು ಕೂಡ ಚಿತ್ರದಲ್ಲಿ ಬಳಸಿಕೊಳ್ಳುತ್ತೇವೆ ಎಂದು ನಿರ್ದೇಶಕ ರಾಮ್ ನಾರಾಯಣ್ ತಿಳಿಸಿದ್ದಾರೆ.