ನಟ ಚಿರಂಜೀವಿ ಸರ್ಜಾ ನಿಧನರಾಗಿ ಒಂದೂವರೆ ವರ್ಷ ಆಗುತ್ತಿದೆ. ಅಕ್ಟೋಬರ್ 17ರಂದು ಚಿರು ಹುಟ್ಟಿದ ದಿನವಾಗಿತ್ತು. ಅವರು ಬದುಕಿದ್ದರೆ ಅಭಿಮಾನಿಗಳು ಹಾಗೂ ಕುಟುಂಬದವರ ಜೊತೆ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಚಿರು ಹುಟ್ಟಿದ ದಿನವೇ ಪತ್ನಿ ಮೇಘನಾ ರಾಜ್ ಹೊಸ ಸಿನಿಮಾ ಘೋಷಿಸಿದ್ದು, ಮತ್ತೆ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದಾರೆ.
ಅಣ್ಣ ಚಿರಂಜೀವಿ ಹುಟ್ಟುಹಬ್ಬವನ್ನು ಧ್ರುವ ಸರ್ಜಾ ಬಹಳ ವಿಶೇಷವಾಗಿ ಆಚರಿಸಿದ್ದಾರೆ. 'ಮಾರ್ಟಿನ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಧ್ರುವ ತಮ್ಮ ತಾಯಿ ಅಮ್ಮಾಜಿ ಮೂಲಕ ಸಹೋದರನ ಹುಟ್ಟಿದ ದಿನವನ್ನು ಅರ್ಥಗರ್ಭಿತವಾಗಿ ಆಚರಣೆ ಮಾಡಿಸಿದ್ದಾರೆ.
ಕನಕಪುರ ರಸ್ತೆಯಲ್ಲಿನ ನೆಲಗೋಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ಚಿರು ಸಮಾಧಿಗೆ ವಿಶೇಷವಾದ ಪೂಜೆ ಮಾಡಿ, ಅನಾಥ ಮಕ್ಕಳಿಗೆ ಊಟ ಹಾಗೂ ಬಟ್ಟೆ ವಿತರಿಸಲಾಗಿದೆ. ಅಲ್ಲದೆ, ಅನಾಥ ವೃದ್ಧರಿಗೆ ಊಟ ಹಾಕಿಸಿ, ಸಿಹಿ ಹಂಚಿ ಚಿರು ಬರ್ತ್ಡೇ ಆಚರಿಸಲಾಗಿದೆ.
ಇವೆಲ್ಲವನ್ನು ಧ್ರುವ ಸರ್ಜಾ ತಮ್ಮ ತಾಯಿಯ ನೇತೃತ್ವದಲ್ಲಿ ಮಾಡಿಸಿದ್ದು, ವಿಡಿಯೋ ಕಾಲ್ ಮೂಲಕ ವೃದ್ಧರ ಜೊತೆ ಅವರು ಮಾತನಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಧ್ರುವ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇರೋವರೆಗೂ ನಿನ್ನ ಮರೆಯೋದಕ್ಕೆ ಆಗೋಲ್ಲ. ನಿನ್ನ ಬರ್ತ್ ಡೇಯನ್ನು ವಿಶೇಷ ಜನರ ಜೊತೆ ಆಚರಿಸಿದ್ದೇನೆ, ಇದು ನಿನಗೆ ಇಷ್ಟ ಆಗುತ್ತೆ ಅಂತಾ ಅಂದುಕೊಂಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ದ್ವಿಪಾತ್ರದಲ್ಲಿ 'ಕಾಲನಾಗಿಣಿ'ಯಾಗಿ ಹರ್ಷಿಕಾ ಪೂಣಚ್ಚ ಅಭಿನಯ