ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಲ್ಲಿವರೆಗೂ ನಟಿಸಿರುವುದು 5 ಚಿತ್ರಗಳಲ್ಲಾದರೂ ಒಂದು ಚಿತ್ರಕ್ಕೆ ಸುಮಾರು 5 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಿರುವುದು ತಿಳಿದ ವಿಚಾರ. ಇದೀಗ ಈ ಪೊಗರು ಹುಡುಗ ಮತ್ತಷ್ಟು 'ದುಬಾರಿ'ಯಾಗಿದ್ದಾರೆ.
ಇದೇನಪ್ಪಾ ಧ್ರುವ ಸರ್ಜಾ ಮತ್ತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ್ರಾ ಎಂದುಕೊಳ್ಳಬೇಡಿ. 'ಪೊಗರು' ಚಿತ್ರದ ನಂತರ ನಂದಕಿಶೋರ್ ನಿರ್ದೇಶನದ ಹೊಸ ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಸುದ್ದಿ ಕನ್ಫರ್ಮ್ ಆಗಿದೆ. ಈ ಚಿತ್ರಕ್ಕೆ 'ದುಬಾರಿ' ಎಂದು ಹೆಸರಿಡಲಾಗಿದೆ. ದುಬಾರಿ ಚಿತ್ರಕ್ಕೆ 'ಐ ಆ್ಯಮ್ ವೆರಿ ಕಾಸ್ಟ್ಲಿ' ಎಂದು ಉಪಶೀರ್ಷಿಕೆಯನ್ನೂ ಇಡಲಾಗಿದೆ. ಈ ಚಿತ್ರಕ್ಕೆ ನಂದಕಿಶೋರ್ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರಂತೆ.
'ದುಬಾರಿ' ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದು, ಸದ್ಯದಲ್ಲೇ ಸಂಗೀತ ನಿರ್ದೇಶಕರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಪೂಜೆಯಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ವಿಜಯದಶಮಿಯಂದು ಚಿತ್ರದ ಮುಹೂರ್ತವಾಗಿ, ನವೆಂಬರ್ 6ರಂದು ಚಿತ್ರದ ಶೀರ್ಷಿಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಜಯದಶಮಿಯಂದು ನಡೆಯಬೇಕಿದ್ದ ಮುಹೂರ್ತವನ್ನು ನವೆಂಬರ್ 6 ಮುಂದೂಡಲಾಗಿತ್ತು. ಅದರಂತೆ ಶುಕ್ರವಾರ, ಅಂದರೆ ಇಂದು ಬಸವೇಶ್ವರ ನಗರದ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.