ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೊನ್ನೆಯಷ್ಟೇ ಫಿಲ್ಮ್ ಚೇಂಬರ್ ಕಚೇರಿ ಬಳಿ ಬಂದು ಬ್ರಾಹ್ಮಣ ಸಮುದಾಯದವರು ಮನವಿ ಸಲ್ಲಿಸಿದ್ದರು. ಇದೀಗ ಚಿತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಂಬೇಡ್ಕರ್ ಸೇನೆ ಹಾಗು ಧ್ರುವ ಸರ್ಜಾ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮತ್ತು ಅಭಿಮಾನಿಗಳು ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್ ಗೆ ದೂರು ನೀಡಿದ್ದಾರೆ. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ ಮಾತನಾಡಿ, "ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ಆರೋಪಿಸಿದ್ದಾರೆ.ಆದರೆ ನಾನು ಕೂಡಾ ಸಿನಿಮಾ ನೋಡಿದೆ, ಸಿನಿಮಾ ಅನ್ನೋದು ಕಾಲ್ಪನಿಕ.ಉದ್ದೇಶ ಪೂರ್ವಕವಾಗಿ ಸಿನಿಮಾದಲ್ಲಿ ಅಪಮಾನ ಮಾಡಿಲ್ಲ. ಸಿನಿಮಾಗಾಗಿ ಧ್ರುವ ಸರ್ಜಾ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ತಿಳಿದೋ ತಿಳಿಯದೆಯೋ ತಪ್ಪು ಆಗಿರಬಹುದು. ಕೊರೊನಾದಿಂದ ಚಿತ್ರರಂಗ ಸಮಸ್ಯೆಯಲ್ಲಿತ್ತು.ಈಗ 'ಪೊಗರು' ಸಿನಿಮಾ ಬಿಡುಗಡೆ ಆಗಿದೆ.ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸೋಷಿಯಲ್ ಮೀಡಿಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸ ಬಾರದು. ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಾವೆಲ್ಲಾ ಸಹಕಾರ ನೀಡಬೇಕು" ಎಂದು ಹೇಳಿದರು.
![Pogaru film](https://etvbharatimages.akamaized.net/etvbharat/prod-images/kn-bng-03-dhruva-sarja-pogaru-cinemage-mathe-kantaka-video-7204735_24022021134436_2402f_1614154476_988.jpg)
ಇದನ್ನೂ ಓದಿ: ಪೊಗರು ವಿವಾದ: ಫಿಲ್ಮ್ ಛೇಂಬರ್ನಲ್ಲಿ ಹೈಡ್ರಾಮಾ
ಇನ್ನು ನಿರ್ದೇಶಕ ರವಿ ಶ್ರೀವತ್ಸ ಕೂಡಾ ಪೊಗರು ಸಿನಿಮಾ ವಿರುದ್ಧ ಮಾತನಾಡಿದ್ದಾರೆ. ಆದರೆ ಅವರು ಮಾಡಿರುವ ಸಿನಿಮಾಗಳನ್ನು ಫ್ಯಾಮಿಲಿ ಕುಳಿತು ನೋಡಲು ಸಾಧ್ಯವೇ ಇಲ್ಲ. ಇದು ಮುಂದುವರೆದರೆ ರವಿ ಶ್ರೀವತ್ಸ ಮನೆಗೆ ಕೂಡಾ ಮುತ್ತಿಗೆ ಹಾಕುತ್ತೇವೆ ಎಂದು ಧ್ರುವ ಸರ್ಜಾ ಅಭಿಮಾನಿಗಳು ಎಚ್ಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿರು ಭಟ್ ಎಂಬ ವ್ಯಕ್ತಿ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಅಭಿಮಾನಿಗಳು ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್, ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.