ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೊನ್ನೆಯಷ್ಟೇ ಧ್ರುವ ಸರ್ಜಾ ತನಗೆ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದರು.
ವೈದ್ಯರ ಸಲಹೆಯಂತೆ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನಿನ್ನೆ ರಾತ್ರಿ ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಪಾಸಿಟಿವ್ ದೃಢವಾಗುತ್ತಿದ್ದಂತೆ ಪ್ರೇರಣಾ ಹಾಗೂ ಧ್ರುವ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು. ಸಣ್ಣಪುಟ್ಟ ಜ್ವರ ಬಿಟ್ಟರೆ ಬೇರೆನೂ ಲಕ್ಷಣಗಳು ಇರಲಿಲ್ಲ. ಹೀಗಾಗಿ ಹೋಂ ಕ್ವಾರಂಟೈನ್ನಲ್ಲಿರಲು ವೈದ್ಯರು ಸೂಚಿಸಿದ ಹಿನ್ನೆಲೆ ನಿನ್ನೆ ರಾತ್ರಿ ಧ್ರುವ ಹಾಗೂ ಪತ್ನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಧ್ರುವ ಸರ್ಜಾ ಹಾಗೂ ಪ್ರೇರಣಾ ಮನೆಯಲ್ಲೇ ಇದ್ದುಕೊಂಡು ಯೋಗ, ಧ್ಯಾನ, ವ್ಯಾಯಾಮ ಮಾಡುತ್ತಾ ಆರೋಗ್ಯದತ್ತ ಗಮನ ನೀಡುತ್ತಿದ್ದಾರೆ.
ಧ್ರುವ ಸರ್ಜಾ ಪ್ರಾಥಮಿಕ ಸಂಪರ್ಕದಲ್ಲಿ ಅವರ ಆಪ್ತ ಮುತ್ತು ಮಾತ್ರ ಇದ್ದರು. ಸದ್ಯಕ್ಕೆ ಮುತ್ತು ಕ್ವಾರಂಟೈನ್ನಲ್ಲಿದ್ದಾರೆ. ಅಲ್ಲದೆ ಮೇಘನಾ ಸರ್ಜಾ ತಾಯಿ ಮನೆಯಲ್ಲಿದ್ದಾರೆ. ಹೀಗಾಗಿ ಅವರೂ ಕೂಡಾ ಸೇಫ್ ಆಗಿ ಇದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಧ್ರುವ ಸರ್ಜಾ ಹಾಗೂ ಪ್ರೇರಣಾ ಇಬ್ಬರೂ ಬೇಗ ಗುಣಮುಖಲಾಗಲೆಂದು ಹಾರೈಸಿದ್ದಾರೆ.