ಕಳೆದ ವರ್ಷ ಬಿಡುಗಡೆಯಾದ 'ಬಜಾರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನ್ವೀರ್ ಗೌಡ ಆ ಚಿತ್ರದ ನಂತರ 'ಬಂಪರ್' ಎಂಬ ಚಿತ್ರ ಒಪ್ಪಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಚಿತ್ರ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್‍ಡೌನ್‍ನಿಂದ ಚಿತ್ರ ಶುರುವಾಗುವುದು ತಡವಾಗಿತ್ತು. ಲಾಕ್‍ಡೌನ್ ಮುಗಿದ ನಂತರ ಟೀಸರ್ ಚಿತ್ರೀಕರಿಸಿದ್ದ ಚಿತ್ರತಂಡ ಅದನ್ನು ಬಿಡುಗಡೆ ಕೂಡಾ ಮಾಡಿತ್ತು. ಜನವರಿಯಿಂದ ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಸಿನಿಮಾ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.
'ಬಂಪರ್' ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಅದರ ಬದಲು ಅದೇ ತಂಡ ಇನ್ನೊಂದು ಚಿತ್ರ ಮಾಡುತ್ತಿರುವ ಸುದ್ದಿ ಇದೆ. 'ಬಂಪರ್' ಸಿನಿಮಾ ಮಾಡಬೇಕಿದ್ದ ನಿರ್ದೇಶಕ ಹರಿ ಸಂತೋಷ್ ಮತ್ತು ನಿರ್ಮಾಪಕ ಸುಪ್ರೀತ್ ಗೌಡ, ಇದೀಗ 'ಬೈಟು ಲವ್' ಎಂಬ ಹೊಸ ಚಿತ್ರವನ್ನು ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಧನ್ವೀರ್ಗೆ ನಾಯಕಿಯಾಗಿ ಶ್ರೀ ಲೀಲಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ, ಧ್ರುವ ಅಭಿನಯದ 'ದುಬಾರಿ' ಚಿತ್ರವನ್ನು ಒಪ್ಪಿಕೊಂಡಿದ್ದರು ಶ್ರೀಲೀಲಾ. ಈಗ ಅದರ ಜೊತೆಗೆ, 'ಬೈಟು ಲವ್' ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಮಲಯಾಳಂ ರಿಮೇಕ್ ಚಿತ್ರದಲ್ಲಿ ಪವನ್ ಕಲ್ಯಾಣ್ & ರಾಣಾ
ಬಜೆಟ್ ಹೆಚ್ಚಾಗಿದ್ದರಿಂದ ಚಿತ್ರವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ಹರಿ ಸಂತೋಷ್, ಚಿತ್ರಕಥೆಯನ್ನು ಇನ್ನಷ್ಟು ತಿದ್ದಿದರಂತೆ. ಈ ನಿಟ್ಟಿನಲ್ಲಿ ಚಿತ್ರ ದೊಡ್ಡದಾಗಿದ್ದು ಬಜೆಟ್ ಕೂಡಾ ಹೆಚ್ಚಾಗಿದೆ ಎನ್ನಲಾಗಿದೆ.ಆದ್ದರಿಂದ ಚಿತ್ರೀಕರಣವನ್ನು ಸ್ವಲ್ಪ ತಡ ಮಾಡಿ ಮೊದಲು ನಿರ್ಧರಿಸಿದ್ದ ಬಜೆಟ್ನಲ್ಲೇ ಸಿನಿಮಾ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯಲಿದೆ ಎನ್ನಲಾಗಿದೆ.