ಬೆಂಗಳೂರು: ನನ್ನ ಅಪ್ಪ-ಅಮ್ಮ, ಅಕ್ಕ ಮೂವರು ರಾಜ್ಯ ಪ್ರಶಸ್ತಿ ವಿಜೇತರು. ಅಂತಹ ಕುಟುಂಬದಲ್ಲಿ ಹುಟ್ಟಿ ಚಿತ್ರರಂಗದಲ್ಲಿ ನಾನು ಏನೂ ಸಾಧನೆ ಮಾಡಿಲ್ಲ ಎಂಬ ಹತಾಶೆಯ ಮಾತುಗಳನ್ನು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮಾತನಾಡಿದ್ದಾರೆ.
ಸೃಜನ್ ಲೋಕೇಶ್ ನಿರ್ಮಾಣ ಮಾಡಿ ನಟಿಸುತ್ತಿರುವ 'ಎಲ್ಲಿದ್ದೆ ಇಲ್ಲಿ ತನಕ ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೆಲಿವಿಷನ್ನಲ್ಲಿ ನಾನು ಹಿಟ್ ಶೋಗಳನ್ನು ನಡೆಸಿಕೊಟ್ಟಿರಬಹುದು. ಆದರೆ, ಸುಬ್ಬಯ್ಯ ನಾಯ್ಡು ಅವರ ಮೊಮ್ಮಗನಾಗಿ ಚಿತ್ರರಂಗದಲ್ಲಿ ನನ್ನ ಕೊಡುಗೆ ಶೂನ್ಯ ಎನ್ನುವುದು ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಬ್ಬಯ್ಯ ನಾಯ್ಡು ಅವರ ಮೊಮ್ಮಗನಾಗಿ, ಲೋಕೇಶ್ ಅವರ ಮಗನಾಗಿ ಏನಾದರೂ ಸಾಧನೆ ಮಾಡಿರುವೆನಾ? ಎಂದು ಎಷ್ಟೋ ಸಲ ನನ್ನನ್ನು ನಾನೇ ಕೇಳಿ ಕೊಂಡಿದ್ದೀನಿ. ನನ್ನ ತಂದೆ ಮೂರು ಸ್ಟೇಟ್ ಅವಾರ್ಡ್, ಮೂರು ಫಿಲ್ಮ್ ಫೇರ್ ಅವಾರ್ಡ್, ನನ್ನ ತಾಯಿ ಗಿರೀಜಾ ಲೋಕೇಶ್ ಅಭಿನಯಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಅಲ್ಲದೆ ನನ್ನ ಅಕ್ಕ ಕೂಡ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಇಂತಹ ಕುಟುಂಬದಲ್ಲಿ ಹುಟ್ಟಿದ ನಾನು ಏನೂ ಮಾಡಿಲ್ಲ ಎಂಬ ಕೊರಗು ನನ್ನ ಕಾಡುತ್ತಿದೆ ಎಂದರು.
ನನಗೆ ಸಿನಿಮಾ ಮಾಡಿ ಹಣ ಮಾಡಬೇಕೆಂಬ ಆಸೆಯಿಲ್ಲ, ಒಂದೊಳ್ಳೆ ಸಿನಿಮಾ ಮಾಡಿದ್ದೀನಿ ಎಂಬ ತೃಪ್ತಿ ಸಿಕ್ಕಿದ್ರೆ ಸಾಕು. 'ಎಲ್ಲಿದ್ದೆ ಇಲ್ಲಿ ತನಕ' ನನಗೆ ತೃಪ್ತಿ ಕೊಟ್ಟಿರುವ ಸಿನಿಮಾ. ಈ ಸಿನಿಮಾ ನೋಡಿ ಅರ್ಹತೆ ಇದ್ರೇ ನನ್ನ ಸಪೋರ್ಟ್ ಮಾಡಿ. ಇಲ್ಲವಾದರೆ ಇದನ್ನು ಪಾಠವಾಗಿ ತೆಗೆದುಕೊಳ್ಳುತ್ತೇನೆ ಎಂದರು.