ಲಂಡನ್: ಬಾಲಿವುಡ್ನ ಜನಪ್ರಿಯ ಸಿನಿಮಾ 'ದಿಲ್ವಾಲೆ ದುಲ್ಹಾನಿಯಾ ಲೆ ಜಾಯೆಂಗೆ'ಗೆ 25 ರ ಸಂಭ್ರಮ. ಇದೀಗ ಈ ಸಂಭ್ರಮದೊಂದಿಗೆ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ನಟ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಪ್ರತಿಮೆಯನ್ನು ಲೀಸೆಸ್ಟರ್ ಸ್ಕ್ವೇರ್ನ 'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ನಿರ್ಮಾಣ ಮಾಡಲಿದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ತಿಳಿಸಿದೆ.
2021ರಲ್ಲಿ ಈ ಪ್ರತಿಮೆ ಅನಾವರಣಗೊಳ್ಳಲಿದ್ದು, ಚಿತ್ರದಲ್ಲಿ ರಾಜ್ ಮತ್ತು ಸಿಮ್ರಾನ್ ಪಾತ್ರದಲ್ಲಿ ನಟಿಸಿರುವ ಖಾನ್ ಮತ್ತು ಕಾಜೋಲ್ ವಿಶೇಷ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲು ಆಗಮಿಸಬೇಕೆಂದಿದ್ದಾರೆ. "ಶಾರುಖ್ ಖಾನ್ ಮತ್ತು ಕಾಜೋಲ್ ಅವರಂತಹ ಅಂತರರಾಷ್ಟ್ರೀಯ ಸಿನೆಮಾದ ನಟರ ಪ್ರತಿಮೆಯನ್ನು ನಮ್ಮ ವೇದಿಕೆಯಲ್ಲಿ ಅನಾವರಣಗೊಳಿಸಲು ಖುಷಿಯಾಗುತ್ತದೆ. ದಿಲ್ವಾಲೆ ದುಲ್ಹಾನಿಯಾ ಲೆ ಜಾಯೆಂಗೆ ಚಿತ್ರ ಸಾರ್ವಕಾಲಿಕ ಮತ್ತು ಅತ್ಯಂತ ಯಶಸ್ವಿ ತಂದ ಬಾಲಿವುಡ್ನ ಚಿತ್ರಗಳಲ್ಲಿ ಒಂದಾಗಿದೆ. ಈ ಪ್ರತಿಮೆಯು ಬಾಲಿವುಡ್ನ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಆಕರ್ಷಿಸುತ್ತದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ನ ಡೆಸ್ಟಿನೇಶನ್ ಮಾರ್ಕೆಟಿಂಗ್ ನಿರ್ದೇಶಕ ಮಾರ್ಕ್ ವಿಲಿಯಮ್ಸ್ ಹೇಳಿದರು.
ಲಂಡನ್ನಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಬಾಲಿವುಡ್ ಪ್ರತಿಮೆ ಇದಾಗಿದೆ. ಇನ್ನು ಭಾರತೀಯ ಚಿತ್ರರಂಗದ ಅತ್ಯಂತ ಪ್ರಿಯವಾದ ಚಿತ್ರ ಡಿಡಿಎಲ್ಜೆಗೆ 25ನೇ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಯಶ್ ರಾಜ್ ಫಿಲ್ಮ್ಗೆ 50ನೇ ವರ್ಷದ ಸಂಭ್ರಮಾಚರಣೆ.
ಯಶ್ ರಾಜ್ ಫಿಲಂನ ಸ್ಪೆಷಲ್ ಪ್ರಾಜೆಕ್ಟ್ಗಳ ಉಪಾಧ್ಯಕ್ಷ ಅವತಾರ್ ಪನೇಸರ್ ಮಾತನಾಡಿದ್ದು, "ದಿಲ್ವಾಲೆ ದುಲ್ಹಾನಿಯಾ ಲೆ ಜಾಯೆಂಗೆ 25 ವರ್ಷಗಳ ಹಿಂದೆ ಬಿಡುಗಡೆಯಾದಾಗ, ಅದು ಉದ್ಯಮದ ಮುಖವನ್ನು ಬದಲಾಯಿಸಿತು. ಚಿತ್ರ ನೋಡಿದ ಪ್ರತಿಯೊಬ್ಬರ ಹೃದಯವನ್ನೂ ಆಕರ್ಷಿಸಿತು. 'ಸೀನ್ಸ್ ಇನ್ ದಿ ಸ್ಕ್ವೇರ್'ನಲ್ಲಿ ಪ್ರತಿನಿಧಿಸಲ್ಪಟ್ಟ ಭಾರತೀಯ ಮೂಲದ ಮೊದಲ ಚಿತ್ರವಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನು ಹಾಲಿವುಡ್ ಗಣ್ಯರೊಂದಿಗೆ ಗುರುತಿಸಲಾಗಿದೆ " ಎಂದು ಸಂತಸ ವ್ಯಕ್ತಪಡಿಸಿದರು.