ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯದಲ್ಲಿ ಸಕ್ರಿಯರಾದಾಗಿನಿಂದ ಸಿನಿಮಾ ಕಡೆ ಹೆಚ್ಚು ಗಮನ ಹರಿಸಿರಲಿಲ್ಲ. ಆದರೆ ಒಂದೂವರೆ ವರ್ಷದ ನಂತರ ಇದೀಗ ಅವರ 'ಐ ಲವ್ ಯು' ಸಿನಿಮಾ ಬಿಡುಗಡೆಯಾಗುತ್ತಿದೆ.
ಆರ್. ಚಂದ್ರು ನಿರ್ದೇಶನದ ಈ ಸಿನಿಮಾ ಜೂನ್ 14 ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಇನ್ನೂ ಒಂದು ತಿಂಗಳಿರುವಾಗಲೇ ಮುಂಗಡ ಟಿಕೆಟ್ಗಾಗಿ ಅಭಿಮಾನಿಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ. ಉಪ್ಪಿಯ ವಿಭಿನ್ನ ಲುಕ್, ಮಾಸ್ ಪಂಚಿಂಗ್ ಡೈಲಾಗ್ ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೇಲೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ ಎಂದು ಚಂದ್ರು ಹೇಳಿದ್ದಾರೆ. ಸಿನಿಮಾ ತೆಲುಗಿನಲ್ಲಿ ಕೂಡಾ ತಯಾರಾಗಿದ್ದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮೂರೂ ರಾಜ್ಯಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ ಎನ್ನಲಾಗ್ತಿದೆ. ಚಿತ್ರ ಲವ್, ಸೆಂಟಿಮೆಂಟ್ ಕಥೆಯನ್ನು ಹೊಂದಿದ್ದು ಪ್ರೀತಿ-ಪ್ರೇಮದ ಪಾಠವನ್ನು ಉಪ್ಪಿ ಬೋಧಿಸಲಿದ್ದಾರೆ.
ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಹಾಗೂ ಸೋನುಗೌಡ ಕಾಣಿಸಿಕೊಂಡಿದ್ದು, ಡಾ. ಕಿರಣ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಆರ್. ಚಂದ್ರು ಅವರೇ ಚಿತ್ರವನ್ನು ನಿರ್ಮಿಸಿದ್ದಾರೆ.