ನಟನಾಗಿ ಚಂದನವನಕ್ಕೆ ಕಾಲಿಟ್ಟು, ಆಮೇಲೆ ಕ್ರಿಯೇಟಿವ್ ಹೆಡ್ ಆಗಿ ನಂತರ ‘ಚೌಕ’ ಚಿತ್ರದಿಂದ ನಿರ್ದೇಶಕನಾಗಿರುವ ಹಿರಿಯ ನಟ ಸುಧೀರ್ ಅವರ ಪುತ್ರ ತರುಣ್ ಕಿಶೋರ್ ಸುಧೀರ್, ಈಗ ‘ರಾಬರ್ಟ್’ ಮೂಲಕ ಹೊಸ ಅಧ್ಯಾಯ ಬರೆಯಲು ಹೊರಟಿದ್ದಾರೆ.
ಅದೇನು ಅಂದ್ರೆ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಕ್ಕೆ ನಿರೀಕ್ಷೆ ಜಾಸ್ತಿಯಿದೆ. ಹಾಗಾಗಿ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಿರುವ ತರುಣ್ ಸುಧೀರ್, ಒಂದು ಕಥೆಗೆ ಸಂಬಂಧಪಟ್ಟ ಪೋಸ್ಟರ್ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಜೂನ್ 5 ರಂದು ರಿಲೀಸ್ ಆಗಲಿರುವ ಈ ಪೋಸ್ಟರ್ನಿಂದ ಅನೇಕ ಅರ್ಥಗಳು ಹೊರ ಬೀಳಲಿವೆಯಂತೆ.
‘ಚೌಕ’ ಸಿನಿಮಾದಲ್ಲಿ ದರ್ಶನ್ ಅವರನ್ನು ರಾಬರ್ಟ್ ಆಗಿ ತೆರೆ ಮೇಲೆ ತೋರಿಸಿದ್ದ ತರುಣ್, ಅದೇ ಶೀರ್ಷಿಕೆಯನ್ನು ಇಟ್ಟುಕೊಂಡು ಚಿತ್ರದ ಪ್ರಾರಂಭಕ್ಕು ಮುಂಚೆ ಪೋಸ್ಟರ್ನಿಂದ ಕ್ರೇಜ್ ಹೆಚ್ಚಿಸಿದರು. ಈಗ ಕಥೆ ಬಗ್ಗೆ ಸುಳಿವು ನೀಡುವ ಕೆಲಸ ಪೋಸ್ಟರ್ ಮುಖಾಂತರ ಮಾಡುತ್ತಿದ್ದಾರೆ. ಇದರೊಂದಿಗೆ ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುವುದಕ್ಕೂ ಸಹಾಯ ಆಗಲಿದೆಯಂತೆ. ಈ ಪ್ರಯತ್ನ ಚಂದನವನದಲ್ಲಿ ಇದೇ ಮೊದಲು ಅನ್ನಿಸುತ್ತೆ.
ಅಂದಹಾಗೆ ಕಥಾ ವಸ್ತು ಹೊಂದಿರುವ ರಾಬರ್ಟ್ ಚಿತ್ರದ ಪೋಸ್ಟರ್ ಜೂನ್ 5 ರಂದು ತರುಣ್ ಅವರ ಟ್ವಿಟರ್ಲ್ಲಿ ಲಭ್ಯವಾಗಲಿದೆ. ಉಮಾಪತಿ ಹಾಗೂ ಶ್ರೀನಿವಾಸಗೌಡ ಈ ಚಿತ್ರದ ನಿರ್ಮಾಪಕರು. ಉಮಾಪತಿ ಅವರು ‘ಹೆಬ್ಬುಲಿ’ ಹಾಗೂ ‘ಒಂದಲ್ಲ ಎರಡಲ್ಲ’ ಸಿನಿಮಾ ನಿರ್ಮಾಣ ಮಾಡಿದವರು.
ಮೇ 5ರಂದು ಐದು ಹಂತಗಳಲ್ಲಿ ‘ರಾಬರ್ಟ್’ ಚಿತ್ರೀಕರಣ ಪ್ರಾರಂಭ ಆಗಿದೆ. ಚಂದ್ರಮೌಳಿ ಹಾಗೂ ರಾಜಶೇಖರ್ ಸಂಭಾಷಣೆ, ಸುಧಾಕರ್ ಕ್ಯಾಮರಾ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಒದಗಿಸಿದ್ದಾರೆ.