ಕಳೆದ ವರ್ಷ ನವೆಂಬರ್ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನಿಧನರಾದ್ದರಿಂದ ನಟ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದರು.
ಈ ಬಾರಿ ನನಗೆ ಕೇಕ್, ಹಾರಗಳನ್ನು ತರುವ ಬದಲು ದವಸ ಧಾನ್ಯಗಳನ್ನು ನನಗೆ ನೀಡಿದರೆ ಖುದ್ದಾಗಿ ಅದನ್ನು ಸಿದ್ಧಗಂಗಾ ಮಠಕ್ಕೆ ನೀಡುವುದಾಗಿ ಹೇಳಿದ್ದರು. ಅದರಂತೆ ಸಾವಿರಾರು ಅಭಿಮಾನಿಗಳು ದರ್ಶನ್ ನಿವಾಸಕ್ಕೆ ಬಂದು ದವಸ ಧಾನ್ಯಗಳನ್ನು ನೀಡಿ ಹೋಗಿದ್ದರು. ಇದೀಗ ದರ್ಶನ್ ಆಪ್ತರು, ಅಭಿಮಾನಿಗಳು ತಂದ ಈ ವಸ್ತುಗಳನ್ನು ನಿನ್ನೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತಲುಪಿಸಿದ್ದಾರೆ.
ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳನ್ನು ಭೇಟಿ ಮಾಡಿದ ದರ್ಶನ್ ಅಭಿಮಾನಿಗಳು, ದವಸ ಧಾನ್ಯಗಳನ್ನು ಅವರಿಗೆ ನೀಡುವುದರ ಜೊತೆಗೆ ಅದರ ಕ್ವಾಲಿಟಿ ಪತ್ರವನ್ನು ಪಡೆದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಅನ್ನ ದಾಸೋಹ ಕಾರ್ಯಕ್ರಮಕ್ಕೆ ದರ್ಶನ್ ಅಭಿಮಾನಿಗಳು ದಾನ ನೀಡುವ ಮೂಲಕ ದರ್ಶನ್ ಸಮಾಜಮುಖಿ ಕೆಲಸಕ್ಕೆ ಜೊತೆಯಾಗಿದ್ದಾರೆ. ನಂತರ ರಾಜ್ಯದ ಇತರ ಅನಾಥಾಶ್ರಮ, ವೃದ್ಧಾಶ್ರಮಗಳಿಗೂ ದವಸ ಧಾನ್ಯಗಳನ್ನು ತಲುಪಿಸುವ ಕಾರ್ಯ ನಡೆಯಲಿದೆ.