ಈ ಸಿನಿಮಾ ಸದ್ದಿಲ್ಲದೆ ಶೇಕಡಾ 50 ರಷ್ಟು ಚಿತ್ರೀಕರಣ ಮುಗಿಸಿದೆ. ಚಿತ್ರವನ್ನು ಓಂಕಾರ್ ನಿರ್ಮಿಸಿದ್ದು ಸಿಲಿಕಾನ್ ಸಿಟಿಯಲ್ಲಿ ಒಂದು ದಿನದಲ್ಲಿ ನಡೆಯುವ ಘಟನೆಯ ಆಧಾರದ ಮೇಲೆ ಕಥೆ ಮಾಡಲಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ 5 ಪ್ರಮುಖ ಪಾತ್ರಗಳಿದ್ದು ಹಾಸ್ಯ ,ಸಾಹಸ , ಥ್ರಿಲ್ಲರ್ ಅಂಶ ಕೂಡಾ ಇದ್ದು ಪ್ರೇಕ್ಷಕರಿಗೆ ಚಿತ್ರ ಬಹಳ ಕುತೂಹಲ ಉಂಟು ಮಾಡಲಿದೆ.
ಬೆಂಗಳೂರು, ಮಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ಕೊರೊನಾ ಭೀತಿ ಕಡಿಮೆ ಆದ ನಂತರ ಸಂಪೂರ್ಣ ಚಿತ್ರೀಕರಣ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ. 'ಗುಳ್ಟು' ಚಿತ್ರದ ನವೀನ್ ಶಂಕರ್, ಐಷಾನಿ ಶೆಟ್ಟಿ, ಯಶ್ವಂತ್ ಶೆಟ್ಟಿ, ಶಾಂಭವಿ, ಜಯಶ್ರೀ, ಮೋಹನ್ ಜುನೇಜ, ಕರಿ ಸುಬ್ಬು, ಸುನಂದ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀಧರ್ ಷಣ್ಮುಖ ಈ ಚಿತ್ರದ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಘೌಸ್ ಪೀರ್ ಬರೆದಿರುವ ಗೀತೆಗಳಿಗೆ ರೋಣದ ಬಕ್ಕೇಶ್ ಹಾಗೂ ಕಾರ್ತಿಕ್ ಚಿನ್ನೋಜಿ ರಾವ್ ರಾಗ ಸಂಯೋಜನೆ ಮಾಡಿದ್ದಾರೆ. ಸಂತೋಷ್, ಶಿವು ಹಾಗೂ ಗುಣಶೇಖರ್ ಚಿತ್ರದ ಸಹ ನಿರ್ದೇಶಕರು. ಚಿತ್ರದ ನಿರ್ಮಾಪಕ ಓಂಕಾರ್, ಕಿಚ್ಚ ಸುದೀಪ್ಗೆ ಆಪ್ತರು. ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಓಂಕಾರ್ ನಿರ್ಮಾಣದಲ್ಲಿ ಶ್ರೀಧರ್ ಷಣ್ಮುಖ ಕಥೆ ಬರೆದು ನಿರ್ದೇಶಿಸುತ್ತಿರುವ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. 1983 ರಲ್ಲಿ ಬಿಡುಗಡೆಯಾಗಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದ ಹೆಸರನ್ನೇ ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ.