ನವೆಂಬರ್ ತಿಂಗಳು ಬಂತಂದ್ರೆ ಕನ್ನಡ ರಾಜ್ಯೋತ್ಸವ ಹಬ್ಬ ಹಾಗೂ ಮೆರವಣಿಗೆ. ಆದರೆ ಕನ್ನಡ ಚಿತ್ರರಂಗ ಅದಕ್ಕೂ ಮುಂಚೆ ‘ಕನ್ನಡಿಗ’ ಚಿತ್ರದ ಮುಹೂರ್ತ ಆಚರಿಸಿಕೊಳ್ಳುತ್ತಿದೆ.
ನಿರ್ದೇಶಕ ಬಿ.ಎಂ.ಗಿರಿರಾಜ್ ಆ್ಯಕ್ಷನ್, ಕಟ್ ಹೇಳುತ್ತಿರುವ ‘ಕನ್ನಡಿಗ’ ಚಿತ್ರದ ಮುಖ್ಯಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಜರ್ಮನಿ ಪಾದ್ರಿ ಪಾತ್ರದಲ್ಲಿ ಜೇಮೀ ಆಲ್ಟರ್ ಅಭಿನಯಿಸುತ್ತಿದ್ದಾರೆ. ಕನ್ನಡ ನಿಘಂಟು ತಜ್ಞ ರೆವರೆಂಡ್ ಕಿಟ್ಟಲ್ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಜೇಮೀ ಆಲ್ಟರ್ ತಂದೆ ಟಾಮ್ ಆಲ್ಟರ್ ಸಹ ಕನ್ನಡದಲ್ಲಿ 1977ರಲ್ಲಿ ಬಿಡುಗಡೆ ಆದ ಎಂ.ಎಸ್ ಸತ್ಯು ನಿರ್ದೇಶನದ ‘ಕನ್ನೆಶ್ವರ ರಾಮ’ ಚಿತ್ರದಲ್ಲಿ ಅಭಿನಯ ಮಾಡಿದ್ದರು. ಅಲ್ಲಿ ಟಾಮ್ ಆಲ್ಟರ್ ಬ್ರಿಟಿಷ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು.
ಇದೇ ತಿಂಗಳ 26 ರಂದು ‘ಕನ್ನಡಿಗ’ ಚಿತ್ರದ ಮುಹೂರ್ತ ನಡೆಯಲಿದೆ. ಹೆಸರಾಂತ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ಅಭಿನಯ ನೋಡಲು ಇದೀಗ ಸಿನಿ ರಸಿಕರು ಕಾತುರರಾಗಿದ್ದಾರೆ. ಈ ಹಿಂದೆ ರವಿಚಂದ್ರನ್ ಕನ್ನಡ ಉಪನ್ಯಾಸಕನಾಗಿ ‘ಪಡ್ಡೆ ಹುಲಿ’ ಚಿತ್ರದಲ್ಲಿ ನಟಿಸಿದ್ದರು.
1850ರ ಸಮಯಕ್ಕೆ ಚಿತ್ರಕಥೆ ಹೋಗಿಬರಲಿದೆ ಎಂದು ‘ಜಟ್ಟ’ ಸಿನಿಮಾ ನಿರ್ದೇಶಕ ಬಿ.ಎಂ.ಗಿರಿರಾಜ್ ಹೇಳಿದ್ದಾರೆ. ‘ಕನ್ನಡಿಗ’ ಶೀರ್ಷಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದು ಬ್ರಿಟಿಷ್ ಮತ್ತು ಪೋರ್ಚುಗಲ್ ಕಾಲದ ಪಿರಿಯಾಡಿಕ್ ಸಿನಿಮಾ ಆಗಲಿದೆ. ಈ ಹಿಂದೆ ‘ಮೈತ್ರಿ’ ಸಿನಿಮಾ ಮಾಡಿದ್ದ ನಿರ್ಮಾಪಕ ಎನ್.ಎಸ್.ರಾಜಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.