ಬೆಂಗಳೂರು: ಕನ್ನಡದ ಕನುಸುಗಾರ, ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ರವಿಮಾಮ, ಹೀಗೆ ಹಲವು ಬಿರುದುಗಳನ್ನ ಹೊಂದಿರುವ ಕನ್ನಡ ನಟ ವಿ.ರವಿಚಂದ್ರನ್. ಕನ್ನಡ ಚಿತ್ರರಂಗವನ್ನ ಶ್ರೀಮಂತಗೊಳಿಸಿದ ಕ್ರೇಜಿಸ್ಟಾರ್ಗೆ ಹುಟ್ಟುಹಬ್ಬದ ಸಂಭ್ರಮ. 60ನೇ ವಸಂತಕ್ಕೆ ಕಾಲಿಟ್ಟಿರುವ ರವಿಚಂದ್ರನ್, ಕಳೆದ ವರ್ಷದಂತೆ ಈ ವರ್ಷವು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ. ಏಕೆಂದರೆ ಈ ವರ್ಷವು ರವಿಮಾಮನ ಹುಟ್ಟುಹಬ್ಬಕ್ಕೆ ಕೊರೊನಾ ಕಂಟಕವಾಗಿದೆ.
ಇಪ್ಪತ್ನಾಲ್ಕು ಗಂಟೆ ಸಿನಿಮಾ ಬಗ್ಗೆ ಯೋಚನೆ ಮಾಡುವ ರವಿಚಂದ್ರನ್, ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದ ಶ್ರೀಮಂತ ನಿರ್ಮಾಪಕ ವೀರಾಸ್ವಾಮಿ ಸುಪುತ್ರ. 1971ರಲ್ಲಿ ಕುಲ ಗೌರವ ಚಿತ್ರದಲ್ಲಿ ಬಾಲ ನಟನಾಗಿ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ.
ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ, ಅಣ್ಣಯ್ಯ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ಮಾಡಿರುವ, ರವಿಚಂದ್ರನ್ಗೆ ಮತ್ತೊಂದು ಹೆಸರು ಇದೆ. ಅದುವೇ ಈಶ್ವರ ಅನ್ನೋ ಹೆಸರು. ಈ ಹೆಸರನ್ನ ರವಿಚಂದ್ರನ್ ತಂದೆ ಹಾಗೂ ತಾಯಿ ಜಾತಕದ ಪ್ರಕಾರ ಇಟ್ಟ ಹೆಸರಂತೆ. ಮನೆಯಲ್ಲಿ ಇವರ ತಂದೆ - ತಾಯಿ ಈಶ್ವರ ಅಂತಾ ಕರೆಯುತ್ತಿದ್ದರು ಅನ್ನೋದು ಯಾರಿಗೆ ಗೊತ್ತಿರಲಿಕ್ಕಿಲ್ಲ.
ಸಹಜವಾಗಿ ಸಿನಿಮಾ ಸೆಲೆಬ್ರಿಟಿಗಳು ದೇವರ ಪೂಜೆ ಮಾಡೋದು ಕಡಿಮೆ. ಆದರೆ, ಕ್ರೇಜಿಸ್ಟಾರ್ನ ಅಚ್ಚುಮೆಚ್ಚಿನ ದೇವರು ಈಶ್ವರ ಅನ್ನೋದು ಈ ಮಾತಿಗೆ ಪೂರಕ. ಏಕಾಂಗಿ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಾರೆ. ಆ ಸಮಯಲ್ಲಿ ಸಿನಿಮಾ ಶೂಟಿಂಗ್ ಹೋದಾಗ, ಈಶ್ವರ ಪ್ರತಿಮೆಯನ್ನ ಮನೆಗೆ ತಗೆದುಕೊಂಡ ಬರ್ತಾರೆ. ಆಗ ಮಲ್ಲ ಅನ್ನೋ ಚಿತ್ರದ ಸೂಪರ್ ಹಿಟ್ ಆಗುತ್ತೆ. ಅಂದಿನಿಂದ ಕ್ರೇಜಿಸ್ಟಾರ್ ಈಶ್ವರನ ಮಹಾನ್ ಭಕ್ತನಾಗಿದ್ದಾರೆ.
ತಾಯಿ ಕೈ ನೀರೇ ಸೀಕ್ರೇಟ್:
ಇನ್ನು ರವಿಚಂದ್ರನ್ ಸೋಲು - ಗೆಲುವುಗಳನ್ನ ಸಾಕಷ್ಟು ನೋಡಿದ್ದಾರೆ. ಆದರೆ ಕ್ರೇಜಿಸ್ಟಾರ್ ಸಕ್ಸಸ್ ಸಿಕ್ರೇಟ್ ಅಂದರೆ, ರವಿಚಂದ್ರನ್ ಸಿನಿಮಾ ಶೂಟಿಂಗ್ ಅಥವಾ ಯಾವುದೇ ಕೆಲಸಕ್ಕೆ ಹೋಗಬೇಕಾದರೆ, ಇವರ ತಾಯಿ ಪಟ್ಟಮ್ಮಲ್ ಕೈಯಲ್ಲಿ ನೀರು ಕುಡಿದು ಹೋದಾಗ ಆ ಕೆಲಸ ಸಕ್ಸಸ್ ಆಗುತ್ತಿದ್ವು ಅನ್ನೋದು ಕ್ರೇಜಿಸ್ಟಾರ್ ನಂಬಿಕೆ.
ಇನ್ನು ರವಿಚಂದ್ರನ್ ಕನ್ನಡ ಚಿತ್ರರಂಗದ ಸಾಕಷ್ಟು ನಟರಿಗೆ ಲಕ್ಕಿ ಹ್ಯಾಂಡ್. ಹೊಸಬರು ಅಥವಾ ಸ್ಟಾರ್ ನಟರ ಸಿನಿಮಾಗಳ ಮುಹೂರ್ತದಲ್ಲಿ ರವಿಚಂದ್ರನ್ ಕ್ಲಾಪ್ ಮಾಡಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿರೋದು ಪುನೀತ್ ರಾಜ್ ಕುಮಾರ್ ಸಿನಿಮಾಗಳು ಸಾಕ್ಷಿ. ಪವರ್ ಸ್ಟಾರ್ ಯಾವುದೇ ಹೊಸ ಸಿನಿಮಾ ಮುಹೂರ್ತ ಆದಾಗ ರವಿಚಂದ್ರನ್ ಅವರೇ ಬಂದು ಕ್ಲಾಪ್ ಮಾಡುವುದು ಒಂದು ವಾಡಿಕೆ.
ಟಾಪ್ ಹಿರೋಹಿನ್ಗಳ ಪರಿಚಯ:
ಆವತ್ತಿನ ಕಾಲದಲ್ಲಿ ತುಂಬಾ ಡಿಮ್ಯಾಂಡ್ ಹಾಗೂ ಬ್ಯೂಟಿಫುಲ್ ಹೀರೋಯಿನ್ ಗಳಾದ ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಹೀಗೆ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತಂದ ಹೆಗ್ಗಳಿಕೆ ರವಿಚಂದ್ರನ್ಗೆ ಸಲ್ಲುತ್ತೆ.
ಪ್ರೇಮಲೋಕ ಸಿನಿಮಾ ಬಂದು ಬರೋಬ್ಬರಿ 33 ವರ್ಷಗಳು ಆಗ್ತಾ ಇದೆ. ಇವತ್ತಿಗೂ ರವಿಚಂದ್ರನ್ ಅವರನ್ನ ಪ್ರೇಮಲೋಕದ ಹೀರೋ ಅಂತಾನೇ ಗುರುತಿಸುತ್ತಾರೆ. ಆ ಕಾಲದಲ್ಲಿ ರವಿಚಂದ್ರನ್ 60 ಲಕ್ಷ ರೂಪಾಯಿ ಖರ್ಚು ಮಾಡಿ ಈ ಸಿನಿಮಾ ಮಾಡುತ್ತಾರೆ. ಆಗ ಇವರ ತಂದೆ ವೀರಸ್ವಾಮಿ, ಇಷ್ಟು ಲಕ್ಷ ಖರ್ಚು ಮಾಡಿ ಸಿನಿಮಾ ಮಾಡಬೇಡ ಅಂತಾ ಹೇಳಿದರು ಕೂಡ, ರವಿಚಂದ್ರನ್ ಪ್ರೇಮಲೋಕ ಸಿನಿಮಾ ಮಾಡಿ ಸಕ್ಸಸ್ ಆಗುತ್ತಾರೆ. ಈ ಸಿನಿಮಾ ಆ ಕಾಲದಲ್ಲಿ ಕೋಟಿ ಕೋಟಿ ಹಣವನ್ನ ಗಳಿಸುತ್ತೆ.
ಕಡಿಮೆ ಟೈಮಲ್ಲಿ ನಟ, ನಿರ್ಮಾಪಕ, ಹಾಗೂ ನಿರ್ದೇಶಕನಾಗಿ ತನ್ನ ಟ್ಯಾಲೆಂಟ್ ಫ್ರೂವ್ ಮಾಡಿದ ಕ್ರೇಜಿಸ್ಟಾರ್, 1999ರಲ್ಲಿ ಬಂದ 'ನಾನು ನನ್ನ ಹೆಂಡ್ತಿರು' ಸಿನಿಮಾ ಮೂಲಕ ಸಂಗೀತ ನಿರ್ದೇಶಕನ ಪಟ್ಟ ಅಲಂಕರಿಸುತ್ತಾರೆ. ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ ಹದಿನೈದಕ್ಕು ಹೆಚ್ಚು ಚಿತ್ರಗಳಿಗೆ ಇವರ ಸಂಗೀತ ಸುಧೆ ಇದೆ.
ಮ್ಯಾಜಿಕ್ ಮಾಮ:
ಕ್ರೇಜಿಸ್ಟಾರ್ ರವಿಚಂದ್ರನ್ ಬಹುಮುಖ ಪ್ರತಿಭೆಯ ನಟ ಅನ್ನೋದು ಎಲ್ಲಾರಿಗೂ ಗೊತ್ತಿರುವ ವಿಚಾರ. ಈ ರವಿಮಾಮನಿಗೆ ಸಿನಿಮಾ ನಂಟು ಇಲ್ಲದೆ ಮತ್ತೊಂದು ಟ್ಯಾಲೆಂಟ್ ಇದೆ. ಅದೆನಪ್ಪ ಅಂದರೆ ರವಿಚಂದ್ರನ್ ಮ್ಯಾಜಿಕ್ ಮಾಡುತ್ತಾರೆ. ಬಹುಶಃ ಇದು ಅದೆಷ್ಟೋ ಜನಕ್ಕೆ ಗೊತ್ತಿಲ್ಲ. ಚಿಕ್ಕವಯಸ್ಸಿನಲ್ಲಿ ರವಿಚಂದ್ರನ್ ಮ್ಯಾಜಿಕ್ ಮಾಡೋದನ್ನ ಕಲಿತಿದ್ದಾರೆ.
1991ರಲ್ಲಿ ರವಿಚಂದ್ರನ್ ಬರೋಬ್ಬರಿ 5 ಕೋಟಿ ರೂ. ಖರ್ಚು ಮಾಡಿ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಶಾಂತಿ - ಕ್ರಾಂತಿ ಸಿನಿಮಾ ಮಾಡುತ್ತಾರೆ. ಆ ಟೈಮಲ್ಲಿ ಬರೋಬ್ಬರಿ 600ಕ್ಕೂ ಹೆಚ್ಚು ಮಕ್ಕಳನ್ನ ಇಟ್ಟುಕೊಂಡ ಸಿನಿಮಾ ಚಿತ್ರೀಕರಣ ಮಾಡಿರುವ ಏಕೈಕ ನಟ ಹಾಗೂ ನಿರ್ದೇಶಕ ರವಿಚಂದ್ರನ್. ಆ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು ರವಿಚಂದ್ರನ್ಗೆ ಸೆಲ್ಯೂಟ್ ಮಾಡಿದರಂತೆ. ಏಕೆಂದರೆ 30 ಜನ ಇರುವ ಮಕ್ಕಳ ನಾವು ನೋಡಿಕೊಳ್ಳೋದಿಕ್ಕೆ ಆಗುವುದಿಲ್ಲ, ನೀವು 600 ಜನ ಮಕ್ಕಳ ನಿಭಾಯಿಸಿದಕ್ಕೆ ಫಿದಾ ಆಗಿದ್ರಂತೆ.
ಕ್ರೇಜಿ-ಹಂಸ ಜೋಡಿ:
ಭಾರತೀಯ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಹಾಗೂ ಒಬ್ಬ ಸ್ಟಾರ್ ಸಂಗೀತ ನಿರ್ದೇಶಕ ಒಟ್ಟಿಗೆ ಕೆಲಸ ಮಾಡಿ, ಬರೋಬ್ಬರಿ 25ಕ್ಕೂ ಹೆಚ್ಚು ಸಿಮಾಗಳ ಸೂಪರ್ ಹಿಟ್ ಹಾಡುಗಳನ್ನ ಹಿಟ್ ಕಾಂಬಿನೇಷನ್ ಅಂದರೆ, ಅದು ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖಾ.
ಇನ್ನು ರವಿಚಂದ್ರನ್ ಅವರಿಗೆ ಸಿನಿಮಾ ಮೇಲೆ ಎಷ್ಟು ಪ್ರೀತಿ ಹಾಗು ವ್ಯಾಮೋಹ ಇದೆ ಅನ್ನುವುದಕ್ಕೆ, ಸಿನಿಮಾದಿಂದ ದುಡಿದ ಹಣವನ್ನ ಯಾವುದೇ ಜಮೀನು, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಕೆಲಸ ಮಾಡಲಿಲ್ಲ. ಈ ಸಿನಿಮಾದಿಂದ ಬಂದ ಹಣವನ್ನ ಪೂರ್ತಿ ಸಿನಿಮಾಕ್ಕೆ ಹಾಕುತ್ತಿದ್ದ ಮೊಟ್ಟ ಮೊದನ ನಟ ಅಂದ್ರೆ ಅದು ರವಿಚಂದ್ರನ್. ಈ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿರುವ ರವಿಚಂದ್ರನ್, ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅಂತಾ ಹೇಳುತ್ತಿದ್ರಂತೆ.
ಒಟ್ಟಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಇಂಡಸ್ಟ್ರಿಗೆ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಏಕೇ ಇಷ್ಟ ಆಗ್ತಾರೆ ಅನ್ನೋದಿಕ್ಕೆ ಕಾರಣಗಳು ಇವು.