ಅನೇಕ ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡಿರುವ ಸಂಕಲನಕಾರ ಜೋನಿ ಹರ್ಷ, ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಹಗಲು ರಾತ್ರಿ ಎನ್ನದೆ ತಿಂಗಳಾನುಗಟ್ಟಲೆ ಶ್ರಮವಹಿಸಿದ್ದಾರೆ. ಇವರ ಜೊತೆ ಐದು ಸಹಾಯಕರು ಈ ಪೌರಾಣಿಕ ಚಿತ್ರಕ್ಕೆ ಸಂಕಲನ ವಿಭಾಗದಲ್ಲಿ ದುಡಿದಿದ್ದಾರೆ.
'ಮುನಿರತ್ನ ಕುರುಕ್ಷೇತ್ರ' ಚಿತ್ರೀಕರಣದ 100 ಗಂಟೆಗಳ ಸರಕನ್ನು ಮೊದಲು 10 ಗಂಟೆಗೆ ಇಳಿಸಲಾಗಿತ್ತಂತೆ. ಆಮೇಲೆ 5 ಗಂಟೆ, ಕೊನೆಗೆ 3 ಗಂಟೆ 5 ನಿಮಿಷಕ್ಕೆ ತರಲಾಗಿದೆಯಂತೆ. ಈ 3 ಗಂಟೆ 5 ನಿಮಿಷದಲ್ಲಿ ಅಸಲಿ ಸಿನಿಮಾ ತೆರೆಯ ಮೇಲೆ 2 ಗಂಟೆ 55 ನಿಮಿಷವಂತೆ.
ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಜೋನಿ, 'ನನ್ನ ಜೀವನದಲ್ಲಿ ಐದು ಸಿನಿಮಾಗಳಿಗೆ ದುಡಿದಷ್ಟು ಈ 'ಕುರುಕ್ಷೇತ್ರ’ಕ್ಕೆ ಶ್ರಮ ಹಾಕಿದ್ದೇನೆ. ಅನೇಕ ಬಾರಿ ಸಿನಿಮಾ ನೋಡಿರುವ ನಾನು ಹೇಳುವುದು ಇಷ್ಟೆ, 'ಹಿಂದೆಂದೂ ಅಥವಾ ಮುಂದೆಂದೂ ಈ ರೀತಿಯ ಭರ್ಜರಿ ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ಜೋನಿ ಹರ್ಷ ಅವರಿಗೆ ಕುರುಕ್ಷೇತ್ರದ ಕೆಲಸದ ತೃಪ್ತಿ ಅಗಾಧವಾಗಿದೆಯಂತೆ.
ಇನ್ನು ಕನ್ನಡದಲ್ಲಿ ‘ಮನಸಾರೆ’ ಮುಖಾಂತರ ಸ್ವತಂತ್ರ ಸಂಕಲನಕಾರ ಆಗಿರುವ ಜೋನಿ ಹರ್ಷ, 100 ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ 75 ಕನ್ನಡ ಸಿನಿಮಾಗಳು. ಕವಚ, ಮಾಸ್ತಿ ಗುಡಿ, ಗೌಡ್ರು ಹೊಟೇಲ್, ಪ್ರೇಮ ಪಲ್ಲಕ್ಕಿ, ಬೆಂಕಿ ಪಟ್ನ, ದಿಲ್ ರಂಗಿಲಾ, ದೇವ್ರು, ಪುಟ್ಟಕ್ಕನ ಹೈ ವೇ, ಸಂಜು ವೆಡ್ಸ್ ಗೀತಾ, ಸಕ್ಕರೆ, ಸಂಕ್ರಾಂತಿ, ಬೆತ್ತನಗೆರೆ, ದೇವರ ನಾಡಲ್ಲಿ, ರಂಗಪ್ಪ ಹೊಗ್ಬಿಟ್ನ, ಮಂತ್ರಮ್, ಮಿಸ್ಸಿಂಗ್ ಬಾಯ್, ಸುಂದರಾಂಗ ಜಾಣ, ಉಪೇಂದ್ರ ಮತ್ತೆ ಬಾ, ಸ್ಮೈಲ್ ಪ್ಲೀಸ್, ಮೈನಾ ಸೇರಿದಂತೆ ಅನೇಕ ಸಿನಿಮಾಗಳು ಇವರ ಪಟ್ಟಿಯಲ್ಲಿವೆ.