ಪರಿಮಳ ಲಾಡ್ಜ್ ಚಿತ್ರದ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಫಿಲ್ಮ್ ಚೇಂಬರ್ಗೆ ಲಿಖಿತ ದೂರು ನೀಡಿದೆ. ಪರಿಮಳ ಲಾಡ್ಜ್ ಚಿತ್ರದ ಟೀಸರ್ ನಲ್ಲಿ ಬಳಸಿದ ಅಶ್ಲೀಲ ಸಂಭಾಷಣೆ ತೆಗೆಯುವಂತೆ ದೂರನಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಚಿತ್ರದ ಟೀಸರ್ನಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗೆಯದೇ ಇದಲ್ಲಿ ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಎಸ್ ವಿಜಯಪ್ರಸಾದ್ ನಿರ್ದೇಶನದ ಲೂಸ್ ಮಾದ, ನೀನಾಸಂ ಸತೀಶ್ ಹಾಗೂ ಸುಮನ್ ರಂಗನಾಥ್ ನಟನೆಯ ಪರಿಮಳ ಲಾಡ್ಜ್ ಎಂಬ ಹೆಸರಿನ ಈ ಚಿತ್ರದ ನಾಯಕ ನಟರ ಮೇಲೆ ಹಾಗೂ ನಿರ್ದೇಶಕ, ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಲಾಗಿದೆ.
ಈ ಚಿತ್ರದಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗಿಸಬೇಕು ಇಲ್ಲವಾದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅದನ್ನು ಮೀರಿ ಚಿತ್ರ ಬಿಡುಗಡೆ ಮಾಡಿದ ಪಕ್ಷದಲ್ಲಿ ವಾಣಿಜ್ಯ ಮಂಡಳಿ ಮುಂದೆ ಹಾಗೂ ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಹೋರಟಗಾರರ ದೂರು ಸ್ವೀಕರಿಸಿ ಮಾತನಾಡಿದ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳಾದ ಎನ್ ಎಮ್ ಸುರೇಶ್, ನಾನು ಕೂಡ ಚಿತ್ರದ ಟೀಸರ್ ನೋಡಿದೆ. ಕೆಲವು ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಇಂದು ಅಧ್ಯಕ್ಷರು ಇಲ್ಲ, ಅವರು ನಾಳೆ ಬರುತ್ತಾರೆ. ಬಂದ ಮೇಲೆ ಚಿತ್ರತಂಡದ ಜೊತೆ ಮಾತನಾಡುತ್ತೇವೆ. ಆನ್ ಲೈನ್ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಚಿತ್ರದಲ್ಲಿ ಇಂತಹ ಸಂಭಾಷಣೆಗೆ ಕಡಿವಾಣ ಹಾಕುವಂತೆ ನಿರ್ದೇಶಕರಿಗೆ ತಿಳಿಸುತ್ತೇವೆ ಎಂದು ಎನ್ ಎಮ್ ಸುರೇಶ್ ಭರವಸೆ ನೀಡಿದರು.
ಇನ್ನು ಪರಿಮಳ ಲಾಡ್ಜ್ ಚಿತ್ರದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿಗೆ ಸಲಿಂಗಕಾಮಿಗಳು ಎಂಬ ಟೈಟಲ್ ನೀಡಲಾಗಿದೆ. ಅಲ್ಲದೇ ಚಿತ್ರದಲ್ಲಿ ನಟಿಸುತ್ತಿರುವ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷ ಟೈಟಲ್ ನೀಡಿ ಪರಿಚಯ ಮಾಡುವ ಮೂಲಕ ಇದು ಕೇವಲ ಚೇಷ್ಟೆ ಅಷ್ಟೇ ಎಂದು ನಿರ್ದೆಶಕ ವಿಜಯ ಪ್ರಸಾದ್ ಸಮರ್ಥಿಸಿ ಕೊಂಡಿದ್ದರು.