ಬೆಂಗಳೂರು : ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ, ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ವಿರುದ್ಧ ಅವರದೇ ಸಂಸ್ಥೆಯ ಮಾಜಿ ನೌಕರರು ನಗರದ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ.
ಗಾಂಧಿನಗರದಲ್ಲಿರುವ ಬಸಂತ್ ಕುಮಾರ್ ಮಾಲಿಕತ್ವದ ಹೋಟೆಲ್ ಬಸಂತ್ ರೆಸಿಡೆನ್ಸಿಯಲ್ಲಿ 2005ರಿಂದ 2012ರವರೆಗೆ ಕೆಲಸ ಮಾಡಿದ ನೌಕರರ ವೇತನದಲ್ಲಿ ಪಿಎಫ್ ಮೊತ್ತ ಕಡಿತ ಮಾಡಲಾಗಿತ್ತು. ಆದರೆ ನೌಕರರು ಕೆಲಸ ಬಿಟ್ಟಂದಿನಿಂದ ಈವರೆಗೂ ಫಿಎಫ್ ಡ್ರಾ ಮಾಡಿಕೊಳ್ಳಲು ಕ್ಲಿಯರೆನ್ಸ್ ನೀಡಿಲ್ಲ. ಫಿಎಫ್ ಪಡೆದುಕೊಳ್ಳಲು ಹೋದ ಸಂದರ್ಭದಲ್ಲಿ ಹೋಟೆಲ್ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಇಲ್ಲದ ಸಬೂಬು ಹೇಳಿ ವಾಪಸ್ ಕಳುಹಿಸಿದ್ದಾರೆ.
ಹೋಟೆಲ್ ಆಡಳಿತ ಮಂಡಳಿ ಪಿಎಫ್ ಪಡೆದುಕೊಳ್ಳಲು ಕ್ಲಿಯರೆನ್ಸ್ ನೀಡದ ಹಿನ್ನೆಲೆಯಲ್ಲಿ ಸಿಬ್ಬಂದಿ, ಮಾಲೀಕ ಬಸಂತ್ ಕುಮಾರ್ ಪಾಟೀಲ್ ಅವರಿಗೂ ಫೋನಾಯಿಸಿ ಮನವಿ ಮಾಡಿದ್ದಾರೆ. ಮೊದಲಿಗೆ, ನೌಕರರ ಪಿಎಫ್ ಕ್ಲಿಯರ್ ಮಾಡಿಕೊಡುವಂತೆ ಎಚ್.ಆರ್ ಮ್ಯಾನೇಜರ್ಗೆ ಸೂಚಿಸುವುದಾಗಿ ತಿಳಿಸಿರುವ ಬಸಂತ್ ಕುಮಾರ್ ಪಾಟೀಲ್, ನಂತರದ ದಿನಗಳಲ್ಲಿ ನೌಕರರಿಗೆ ಪಿಎಫ್ ಕೊಡಿಸುವ ಬದಲಿಗೆ ಫೋನ್ ಮಾಡದಂತೆ ಗದರಿಸುತ್ತಿದ್ದಾರೆ. ಹೋಟೆಲ್ ಮಾಲಿಕ ಬಸಂತ್ ಕುಮಾರ್ ಪಾಟೀಲ್ ಹಾಗೂ ಆಡಳಿತ ಮಂಡಳಿಯು ಪಿಎಫ್ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿರುವ ಮಾಜಿ ನೌಕರರು ಈ ಸಂಬಂಧ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಆಯುಕ್ತರಿಗೆ ಇಂದು ಲಿಖಿತ ದೂರು ಸಲ್ಲಿಸಿದ್ದಾರೆ.
ಹೋಟೆಲ್ಗಾಗಿ ವರ್ಷಗಟ್ಟಲೆ ದುಡಿದಿದ್ದರೂ ಮಾಲಿಕರಾಗಲೀ, ಮ್ಯಾನೇಜ್ಮೆಂಟ್ ಆಗಲೀ ಈವರೆಗೂ ಪಿಎಫ್ ನಂಬರ್ ಕೂಡ ಕೊಟ್ಟಿಲ್ಲ. ಕೊರೊನಾ ಸಮಯವಾದ್ದರಿಂದ ಯಾವ ಹೋಟೆಲ್ನಲ್ಲೂ ಕೆಲಸವಿಲ್ಲದಂತಾಗಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ಪಿಎಫ್ ಆಯುಕ್ತರು ಮಧ್ಯ ಪ್ರವೇಶಿಸಿ ಪಿಎಫ್ ಕ್ಲಿಯರ್ ಮಾಡಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಮಾಹಿತಿ ಕೇಳಲು ಮಾಧ್ಯಮದವರು ಕರೆ ಮಾಡಿದ ಸಂದರ್ಭದಲ್ಲಿ ಇದನ್ನೆಲ್ಲಾ ಕೇಳಲು ನಿಮಗೇನು ಅಧಿಕಾರವಿದೆ ಎಂದು ಜೋರು ಮಾಡುತ್ತಿದ್ದಾರೆ. ಜತೆಗೆ ಕರೆ ನಿರ್ಬಂಧಿಸುತ್ತಿದ್ದಾರೆ. ಸಂಬಳದಲ್ಲಿ ಕಡಿತ ಮಾಡಿದ ಪಿಎಫ್ ಸರಿಯಾಗಿ ಪಾವತಿಸಿಲ್ಲ ಎಂಬ ಕಾರಣಕ್ಕಾಗಿಯೇ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ 80 ಮಂದಿ ಸಿಬ್ಬಂದಿಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.