ಕನ್ನಡ ಚಿತ್ರರಂಗದಲ್ಲಿ ಸಕಲಕಲಾವಲ್ಲಭ ಎಂದು ಕರೆಯಿಸಿಕೊಂಡಿರುವ ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಸದ್ಯ ನಟನೆ ಜೊತೆಗೆ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾರೆ.
ನಿರ್ದೇಶನದಿಂದ ದೂರವಾಗಿ ನಟನೆ ಮತ್ತು ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸಾಧು ಮಹಾರಾಜ್, ಐದು ವರ್ಷಗಳ ಬಳಿಕ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಜಾಲಿ ಲೈಫ್ ಎನ್ನುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅಮೃತವಾಣಿ, ಪೆರೋಲ್ ಮತ್ತು ಬರ್ಫಿ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಶೇಖರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ನಿರ್ಮಾಪಕ ರಾಜಶೇಖರ್, ಸಾಧು ಕೋಕಿಲ, ಕ್ಯಾಮರಾ ಮ್ಯಾನ್ ಗುಂಡ್ಲುಪೇಟೆ ಸುರೇಶ್ ಸೇರಿದಂತೆ 10ಕ್ಕೂ ಹೆಚ್ಚು ಯುವ ಪ್ರತಿಭೆಗಳ ಸಮ್ಮುಖದಲ್ಲಿ ಈ ಜಾಲಿ ಲೈಫ್ ಸಿನಿಮಾದ ಬಗ್ಗೆ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡರು. ಇನ್ನು ಸಾಧು ಕೋಕಿಲ ಮಗ ಸುರಾಗ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದು, ಏಪ್ರಿಲ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಲಿದೆ. ಜುಲೈ, ಆಗಸ್ಟ್ ವೇಳೆಗೆ ಚಿತ್ರ ತೆರೆಗೆ ಬರಲಿದೆ.