ಸುಮಾರು 40-50 ವರ್ಷಗಳ ಹಿಂದೆ ಬಿಡುಗಡೆಯಾದ ಕೆಲವೊಂದು ಕಪ್ಪು-ಬಿಳುಪು ಚಿತ್ರಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಬಣ್ಣದ ಸ್ಪರ್ಶ ನೀಡಿರುವುದು ನಿಮಗೆ ತಿಳಿದಿರುವ ವಿಚಾರ. ಇದೀಗ ನಟಸಾರ್ವಭೌಮ ಡಾ. ರಾಜ್ಕುಮಾರ್ ಅಭಿನಯದ 'ಮಂತ್ರಾಲಯ ಮಹಾತ್ಮೆ' ಚಿತ್ರಕ್ಕೂ ಕೂಡಾ ರಂಗು ನೀಡಲಾಗುತ್ತಿದೆ.
ಟಿ.ವಿ. ಸಿಂಗ್ ಠಾಕೂರ್ ನಿರ್ಮಿಸಿ ನಿರ್ದೇಶಿಸಿದ್ದ ಈ ಸಿನಿಮಾ ಅಂದು ಬಹಳ ಯಶಸ್ತು ಕಂಡಿತ್ತು. ರಾಜಗುರು ರಾಜಾಚಾರ್ಯ ಅವರು ರಚಿಸಿದ ರಾಘವೇಂದ್ರ ವಿಜಯ ಆಧಾರಿತ ರಾಯರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ಬೆಳ್ಳಿ ಪರದೆಯ ಮೂಲಕ ತೋರಿಸಲಾಗಿತ್ತು. ದೊರೈ ರಾಜ್ ಛಾಯಾಗ್ರಹಣ, ರಾಜನ್ ನಾಗೇಂದ್ರ ಸಂಗೀತ, ಎನ್.ಸಿ. ರಾಜನ್ ಅವರ ಸಂಕಲನ ಇರುವ ಈ ಸಿನಿಮಾ 54 ವರ್ಷಗಳ ಬಳಿಕ ಕಲರ್ ರೂಪದಲ್ಲಿ ಮತ್ತೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ.
ಈ ಸಿನಿಮಾ ಸಿ. ಜಗಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿತ್ತು. ಈ ಚಿತ್ರಕ್ಕೆ ಬಣ್ಣದ ರೂಪ ನೀಡಬೇಕೆಂದು ಪಾರ್ವತಮ್ಮ ರಾಜ್ಕುಮಾರ್ ಅವರು ಆಸೆ ವ್ಯಕ್ತಪಡಿಸಿದ್ದರಂತೆ. ಇದೀಗ ನಿರ್ದೇಶಕ ಎಸ್.ಕೆ. ಭಗವಾನ್ ಅವರು ಪಾರ್ವತಮ್ಮ ಅವರ ಆಸೆಯನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾರೆ. 'ಕಸ್ತೂರಿ ನಿವಾಸ' ಚಿತ್ರಕ್ಕೆ ಬಣ್ಣದ ಸ್ಪರ್ಶ ನೀಡುವಾಗ 'ಮಂತ್ರಾಲಯ ಮಹಾತ್ಮೆ' ಚಿತ್ರಕ್ಕೂ ಕಲರ್ ಅಳವಡಿಸಿದರೆ ಚೆನ್ನಾಗಿರುತ್ತದೆ ಎಂದು ಪಾರ್ವತಮ್ಮ ರಾಜ್ಕುಮಾರ್ ಅವರು ಮನದಾಸೆಯನ್ನು ಹೇಳಿಕೊಂಡಿದ್ದರಂತೆ.
ಇನ್ನು 1960 ರಲ್ಲಿ ಬಿಡುಗಡೆಯಾದ ಡಾ. ರಾಜ್ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾವನ್ನು ದಿವಂಗತ ಕೆ.ಸಿ.ಎನ್. ಗೌಡರು ಕಲರ್ ಸಿನಿಮಾವಾಗಿ ರೂಪಾಂತರ ಮಾಡಿದ್ದರು. 'ಸತ್ಯ ಹರಿಶ್ಚಂದ್ರ' ಕಲರ್ಗೆ ರೂಪಾಂತರವಾದ ಮೊದಲ ಕಪ್ಪು ಬಿಳುಪು ಕನ್ನಡ ಚಿತ್ರ. ಹಿಂದಿಯಲ್ಲಿ 'ಮುಘಲ್ ಇ ಅಜಾಮ್' ಸಿನಿಮಾ ಕಪ್ಪು ಬಿಳುಪಿನಿಂದ ಕಲರ್ಗೆ ರೂಪಾಂತರವಾದ ಸ್ಫೂರ್ತಿಯಿಂದ ಕೆ.ಸಿ.ಎನ್. ಗೌಡರು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕೆ ಬಣ್ಣದ ಲೇಪನ ನೀಡಿದ್ದರು.
ಇದೀಗ 'ಮಂತ್ರಾಲಯ ಮಹಾತ್ಮೆ' ಕೂಡಾ ಕಲರ್ ರೂಪ ಪಡೆಯುತ್ತಿದೆ. ಲಾಕ್ಡೌನ್ ಮುನ್ನವೇ ಈ ಕೆಲಸ ಆರಂಭವಾಗಿತ್ತಂತೆ. ಈ ವರ್ಷದ ಕೊನೆಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ದೇಶಕ ಭಗವಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.