ಬೆಂಗಳೂರು: ಹಿರಿಯ ನಟ ರಾಜೇಶ್ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದ್ದು, ರಾಜಕಾರಣಿಗಳು, ಸಿನಿಮಾ ರಂಗದ ಪ್ರಮುಖರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್, ಹಿರಿಯ ನಟಿ ಗಿರಿಜಾ ಲೋಕೇಶ್, ಪ್ರಮೀಳಾ ಜೋಷಾಯ್, ಹಿರಿಯ ನಟ ಸುಂದರ್ರಾಜ್, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಯುವ ರಾಜಕುಮಾರ್ ಸೇರಿದಂತೆ ಹಲವರು ರಾಜೇಶ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಅಲ್ಲದೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಕೂಡ ತಾತನ ಅಂತಿಮ ದರ್ಶನ ಪಡೆದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜೇಶ್ ಅವರು ನನಗೆ ದೀರ್ಘ ಕಾಲದಿಂದ ಪರಿಚಯ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ನಟನೆಯಿಂದ ಛಾಪು ಮೂಡಿಸಿದ್ದರು. ರಂಗಭೂಮಿ ಮೂಲಕ ನಟನೆಗೆ ಪ್ರವೇಶಿಸಿ ಸುಮಾರು 150 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅನೇಕ ಸಿನಿಮಾಗಳನ್ನು ವೀಕ್ಷಿಸಿದ್ದೇನೆ. ಜನಪ್ರಿಯತೆ ಇಲ್ಲದಿದ್ದರೆ ಅಷ್ಟು ಸಿನಿಮಾಗಳಲ್ಲಿ ನಟಿಸಲಾಗಲ್ಲ. ನಮ್ಮ ಮನೆಗೆಲ್ಲಾ ಅವರು ಬಂದಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ನನ್ನನ್ನು ಭೇಟಿ ಮಾಡಿದ್ದರು. ಅವರ ನಿಧನದಿಂದ ಕರ್ನಾಟಕಕ್ಕೆ ನಷ್ಟ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜೇಶ್ ಅವರು ಕರ್ನಾಟಕ ಚಲನಚಿತ್ರ ಜಗತ್ತಿನಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಡಾ. ರಾಜ್ಕುಮಾರ್ ಜೊತೆ ಜೊತೆಗೆ ನಾಯಕನಾಗಿ, ಪೋಷಕ ಪಾತ್ರಗಳನ್ನೂ ಮಾಡಿದ್ದಾರೆ. ಹಲವಾರು ಹೆಸರಾಂತ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಕಲಾ ಸೇವೆ ಮಾಡಿದವರು. ದೊಡ್ಡ ನಟರಾದರೂ ಬಹಳ ಸರಳ ಜೀವನ ನಡೆಸಿದ ರಾಜೇಶ್ ಅವರನ್ನು ಕಳೆದುಕೊಂಡು ಬಹಳ ನೋವಾಗಿದೆ. ಅಗಲಿಕೆಯು ಸದಾಕಾಲ ನಮ್ಮನ್ನು ಕಾಡಲಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: ನಟ ರಾಜೇಶ್ ಅಂತ್ಯಕ್ರಿಯೆಗೆ 10 ಗುಂಟೆ ಜಾಗ ನೀಡಿದ ಅಭಿಮಾನಿ: ಧನ್ಯವಾದ ಅರ್ಪಿಸಿದ ಸರ್ಜಾ