ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಕರುನಾಡಿಗೆ ಬರ ಸಿಡಿಲು ಬಡಿದಂತಾಗಿದೆ. ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯಕ್ಕೆ 2 ವರ್ಷ ಕಳೆದಿದೆ. ವಿಧಿಯ ಆಟ ಮುದ್ದು ಮಗುವಿನ ಮುಖ ನೋಡುವ ಮುನ್ನವೇ ಚಿರು ಇಹಲೋಕ ತ್ಯಜಿಸಿದ್ದಾರೆ.
ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಪ್ರಾಣಿ ಪ್ರಿಯರಾಗಿದ್ದರು. ಅದರಲ್ಲಿಯೂ ಹೆಚ್ಚಾಗಿ ಶ್ವಾನಪ್ರಿಯವಾಗಿತ್ತು ಈ ಮುದ್ದು ಜೋಡಿ. ಚಿರು ಹಾಗೂ ಮೇಘನಾ ತಮ್ಮ ಮುದ್ದಿನ ಶ್ವಾನಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಲೇ ಇರುತ್ತಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಹಾಗಾಗಿ ಈ ಶ್ವಾನ ಪ್ರಿಯ ದಂಪತಿ ತಮ್ಮ ಮನೆಯ ಮುದ್ದಿನ ನಾಯಿ ಮರಿಯೊಂದನ್ನು ಡಿ-ಬಾಸ್ ದರ್ಶನ್ಗೆ ಗಿಫ್ಟ್ ಆಗಿ ನೀಡಿದ್ದರು.
![Chiranjeevi Sarja is no more](https://etvbharatimages.akamaized.net/etvbharat/prod-images/7518684_thum.png)
ಚಿರು ಹಾಗೂ ಮೇಘನಾ ರಾಜ್ ಇಬ್ಬರದು ಒಂದು ದಶಕದ ಪ್ರೀತಿ. 2017ರಲ್ಲಿ ಎಂಗೇಜ್ಮೆಂಟ್ ಆಗಿದ್ದ ಈ ಜೋಡಿ, ಅದ್ದೂರಿಯಾಗಿ 2018ರ ಮೇ ತಿಂಗಳಿನಲ್ಲಿ ಏರ್ಪಡಿಸಿದ್ದ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರ ಜೊತೆಗೆ ಅಪ್ಪನಾಗುವ ಖುಷಿಯಲ್ಲಿದ್ದರು ಚಿರಂಜೀವಿ ಸರ್ಜಾ. ಆದರೆ, ವಿಧಿ ಲಿಖಿತ ಬೇರೆಯೇ ಇತ್ತು. ಇಂದು ಅವರು ಅಕಾಲಿಕ ಮರಣ ಹೊಂದಿದ್ದಾರೆ.
ಮಾವ ಅರ್ಜುನ್ ಸರ್ಜಾ ಮೂಲಕ ಸಿನಿಮಾ ರಂಗಕ್ಕೆ ಪರಿಚಯವಾಗಿದ್ದ ಚಿರು, ವಾಯುಪುತ್ರ' ಮೂಲಕ ಕೆರಿಯರ್ ಆರಂಭಿಸಿದ್ದರು. ಚಿರು, ದಂಡಂ ದಶಗುಣಂ, ವರದ ನಾಯಕ, ಗಂಡೆದೆ, ಸಿಂಗ ಸೇರಿ 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು ಈ ವಾಯುಪುತ್ರ. ಚಿರಂಜೀವಿ ಕುಟುಂಬ ತಲೆತಲಾಂತರದಿಂದಲೂ ಆಂಜನೇಯ ಸ್ವಾಮಿಯ ಪರಮ ಭಕ್ತರಾಗಿದ್ದರು.