ಇದು ದುರಾದೃಷ್ಟ ಆದರೂ ವ್ಯಾಪಾರದ ದೃಷ್ಟಿಯಿಂದ ಮನರಂಜನಾ ಕ್ಷೇತ್ರದಲ್ಲಿ ಸತ್ಯ. ದುರಾದೃಷ್ಟ ನಟ ಚಿರಂಜೀವಿ ಸರ್ಜಾ ಕೇವಲ 35 ನೇ ವಯಸ್ಸಿಗೆ ನಿಧನ ಹೊಂದಿದ್ದು. ಸತ್ಯ ಏನಪ್ಪಾ ಅಂದ್ರೆ, ಚಿರು ಬದುಕಿದ್ದಾಗ 2020 ರ ಮಾರ್ಚ್ 13 ರಂದು ಗುರುವಾರ ಬಿಡುಗಡೆಯಾದ ‘ಶಿವಾರ್ಜುನ’ ಕನ್ನಡ ಸಿನಿಮಾದ ಮೇಲೆ ಜನರ ಒಲವು ಹೆಚ್ಚಾಗಿದ್ದು.
ಮಾರ್ಚ್ 13 ರಂದು ಬಿಡುಗಡೆಯಾದ ಶಿವಾರ್ಜುನ, 14 ರ ರಾತ್ರಿಯಿಂದ ಪ್ರದರ್ಶನ ಕಾಣಲಿಲ್ಲ. ಇದಕ್ಕೆ ಕಾರಣ ಕೊರೊನಾ ಹಾವಳಿ. ಇದೇ, ರೀತಿ ಕೇವಲ ಎರಡೇ ದಿನದಲ್ಲಿ ಪ್ರದರ್ಶನ ಸ್ಥಗಿತಗೊಂಡ ಇನ್ನೊಂದು ಚಿತ್ರ ಅಂದರೆ ‘ನರಗುಂದ ಭಂಡಾಯ’. ಮಾರ್ಚ್ 14 ರಂದು ಈ ಎರಡು ಚಿತ್ರಗಳು ಸೇರಿ ಒಟ್ಟು ಆರು ಕನ್ನಡ ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ಆರು ಸಿನಿಮಾಗಳ ಪೈಕಿ ಹೆಚ್ಚು ಸದ್ದು ಮಾಡಿರುವುದು ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ. ಶಿವಾರ್ಜುನ ಸಿನಿಮಾ ಹೆಚ್ಚು ಪ್ರಚಾರ ಪಡೆಯಲು ಮುಖ್ಯ ಕಾರಣವೆಂದರೆ ಚಿರು ಅಗಲಿಕೆಯಿಂದ ಉಂಟಾದ ಸಿಂಪತಿ. ಬಿಡುಗಡೆಗೊಂಡು ಎರಡೇ ದಿನಕ್ಕೆ ಪ್ರದರ್ಶನ ಸ್ಥಗಿತಗೊಂಡಿರುವ ಶಿವಾರ್ಜುನ ಚಿತ್ರ, ಮುಂದಿನ ಅಕ್ಟೋಬರ್ 2 ರಂದು ಮರು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಹೆಚ್ಚಿನ ಚಿತ್ರ ಮಂದಿರಗಳು ಮತ್ತು ಪ್ರೇಕ್ಷರ ಒಲವು ದೊರಕುದರಲ್ಲಿ ಯಾವುದೇ ಸಂದೇಹವಿಲ್ಲ.
ಪಕ್ಕಾ ಆ್ಯಕ್ಷನ್ ಮಸಾಲ ಚಿತ್ರವಾಗಿರುವ ಶಿವಾರ್ಜುನದಲ್ಲಿ, ಚಿರಂಜೀವಿ ಸರ್ಜಾ ಜೊತೆ ಮೂವರು ನಾಯಕಿಯರಾದ ಅಮೃತ ಅಯ್ಯಂಗಾರ್, ಅಕ್ಷತಾ ಹಾಗೂ ಅಕ್ಷಿತ ಜೊತೆಯಾಗಿದ್ದಾರೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಜೊತೆ ಹಾಸ್ಯ ಸನ್ನಿವೇಶಗಳು ಇವೆ. ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಶಿವಾರ್ಜುನ್ ಈ ಚಿತ್ರದ ಮೂಲಕ ನಿರ್ಮಾಪಕ ಆಗಿದ್ದಾರೆ. ಅವರ ಪತ್ನಿ ಎಂ.ಬಿ ಮಂಜುಳಾ ಹೆಸರಿನಲ್ಲಿ ಹಣ ಹೂಡಿದ್ದಾರೆ. ಶಿವ ತೇಜಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೆಚ್. ಸಿ ವೇಣು ಛಾಯಾಗ್ರಹಣ, ಸುರಾಗ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕೆ ಕೆ.ಎಂ ಪ್ರಕಾಷ್ ಸಂಕಲನ, ರವಿ ವರ್ಮಾ, ವಿನೋದ್ ಹಾಗೂ ಥ್ರಿಲ್ಲರ್ ಮಂಜು ಸಾಹಸ, ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಿಶೋರ್, ತಾರಾ ಅನುರಾಧ, ಮಾಸ್ಟರ್ ಶ್ರೀ ಕೃಷ್ಣ, ಅವಿನಾಷ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧು ಕೋಕಿಲ, ರವಿ ಕಿಷನ್, ತರಂಗ ವಿಶ್ವ, ಶಿವರಾಜ್ ಕೆ.ಆರ್ ಪೇಟೆ, ನಯನ ಹಾಗೂ ಇತರರು ಬಣ್ಣ ಹಚ್ಚಿದ್ದಾರೆ.