ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ನಾಯಕ ಶಿವ ಆಗಿ ಅಭಿನಯಿಸಿದ್ದ ಚೇತನ್ ಚಂದ್ರ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾನೂ ನನ್ನ ಕನಸು ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸಿ ಮೋಡಿ ಮಾಡಿದ್ದರು. ಕಿರುತೆರೆಯ ನಂತರ ಇದೀಗ ಹಿರಿತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ ಚೇತನ್ ಚಂದ್ರ.
ಅರವಿಂದ್ ಕೌಶಿಕ್ ನಿರ್ದೇಶನದ ಶಾರ್ದೂಲ ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ಚೇತನ್ ಚಂದ್ರ. ಅಂದ ಹಾಗೇ ಮನೋಜ್ಞ ಅಭಿನಯದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಚೇತನ್ ಚಂದ್ರ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಹಿರಿತೆರೆ.
ಪಿಯುಸಿ ಸಿನಿಮಾದಲ್ಲಿ ಭವೀಶ್ ಆಗಿ ನಟಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟಿರುವ ಚೇತನ್ ಚಂದ್ರ ತದ ನಂತರ ಪ್ರೇಮಿಸಂ, ರಾಜಧಾನಿ, ಜರಾಸಂಧ, ಕುಂಭರಾಶಿ, ಹುಚ್ಚುಡುಗರು, ಪ್ಲಸ್, ಜಾತ್ರೆ, ಸಂಯುಕ್ತ 2, ವ್ಯಾಘ್ರ ಮತ್ತು ಪ್ರಭುತ್ವ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನಂತರ ಹಿರಿತೆರೆಯಿಂದ ಕೊಂಚ ಗ್ಯಾಪ್ ಪಡೆದು ಕಿರುತೆರೆಯತ್ತ ಮುಖ ಮಾಡಿದರು. ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾಗಿದ್ದ ಚೇತನ್ ಚಂದ್ರ ಇದೀಗ ಶಾರ್ದೂಲ ಸಿನಿಮಾದ ಮೂಲಕ ಮಗದೊಮ್ಮೆ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮುಖ್ಯವಾದ ವಿಚಾರವೆಂದರೆ ಶಾರ್ದೂಲ ಸಿನಿಮಾದಲ್ಲಿ ನಾಯಕಿಯಾಗಿ ರಾಧಾ ಕಲ್ಯಾಣ ಖ್ಯಾತಿಯ ಕೃತಿಕಾ ರವೀಂದ್ರ ಅಭಿನಯಿಸಿದ್ದಾರೆ.