ಸಿಂಪಲ್ ಸ್ಟಾರ್, ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ನ ಅವತಾರ ತಾಳಿದ ನಂತರ ಇದೀಗ 'ಚಾರ್ಲಿ' ರೂಪದಲ್ಲಿ ಪ್ರೇಕ್ಷಕ ಪ್ರಭುಗಳನ್ನು ರಂಜಿಸಲು ಬರುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ 'ಚಾರ್ಲಿ 777' ಚಿತ್ರ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ.
ನೂರು ದಿನಗಳ ಕಾಲ ಶೂಟಿಂಗ್ ಮುಗಿಸಿರುವ ಚಿತ್ರತಂಡ , ಇನ್ನು 30 ದಿನಗಳ ಶೂಟಿಂಗ್ ಬಾಕಿ ಇಟ್ಟಿದೆ. ಲಾಕ್ಡೌನ್ ಪರಿಣಾಮ ಚಿತ್ರತಂಡ ಶೂಟಿಂಗ್ ಮುಗಿಸಿರುವ ಭಾಗವನ್ನು ಎಡಿಟ್ ಮಾಡುತ್ತಿದೆ. ಇನ್ನು 'ಚಾರ್ಲಿ 777' ಚಿತ್ರದ ಕಥೆ ವಿಷಯಕ್ಕೆ ಬರುವುದಾದರೆ ಶ್ವಾನದ ಜೊತೆಗಿನ ಒಡನಾಟವನ್ನು ಈ ಚಿತ್ರದಲ್ಲಿ ತೋರಿಸಲು ನವ ನಿರ್ದೇಶಕ ಕಿರಣ್ ರಾಜ್ ಹೊರಟಿದ್ದಾರೆ. ಚಿತ್ರಕ್ಕಾಗಿ ನಿರ್ದೇಶಕ ಕಿರಣ್ ರಾಜ್ ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಶ್ವಾನ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದು ಶ್ವಾನದೊಂದಿಗೆ ಚಿತ್ರೀಕರಣ ಮಾಡುವುದು ಚಾಲೆಂಜ್ ಆಗಿದೆ ಎಂದು ಕಿರಣ್ ರಾಜ್ ಹೇಳಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಶ್ವಾನವನ್ನು ಪುಟ್ಟಮರಿ ಇದ್ದಾಗಲೇ ತೆಗೆದುಕೊಂಡು ಅದಕ್ಕೆ 2 ವರ್ಷಗಳ ಕಾಲ ಟ್ರೈನಿಂಗ್ ನೀಡಿದ ಕಾರಣ ಶೂಟಿಂಗ್ ಮುಗಿಸಲು ತಡವಾಗುತ್ತಿದೆ ಎನ್ನುತ್ತಾರೆ ಕಿರಣ್. ಚಿತ್ರವನ್ನು ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸುಮಾರು 15 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಮಾಡಲಾಗಿದೆ. ಈ ಚಿತ್ರವನ್ನು ಪರಂವ: ಬ್ಯಾನರ್ ಅಡಿ ರಕ್ಷಿತ್ ಶೆಟ್ಟಿ ಹಾಗೂ ಜಿ.ಎಸ್. ಗುಪ್ತ ನಿರ್ಮಾಣ ಮಾಡುತ್ತಿದ್ದು ನಾಯಕಿಯಾಗಿ ಕನ್ನಡತಿ ಸಂಗೀತ, ರಕ್ಷಿತ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ಇದ್ದು, ಈ ವರ್ಷದ ಅಂತ್ಯಕ್ಕೆ 'ಚಾರ್ಲಿ 777' ಸಿನಿಪ್ರಿಯರನ್ನು ರಂಜಿಸಲು ತೆರೆ ಮೇಲೆ ಬರಲಿದ್ದಾನೆ.