ಸ್ಯಾಂಡಲ್ವುಡ್ನಲ್ಲಿ 'ಧೀರನ್' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದು ಸದ್ದಿಲ್ಲದೆ ಬಹುತೇಕ ಚಿತ್ರೀಕರಣವನ್ನು ಮುಗಿಸಿದೆ, ಇದೀಗ ಚಿತ್ರತಂಡ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್ ಅನ್ನು ಲಾಂಚ್ ಮಾಡಿದೆ.
ಅಲ್ಲದೆ ಚಿತ್ರದ ಶೀರ್ಷಿಕೆ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಲಾಂಚ್ ಮಾಡಿದ್ದು, ಚಿತ್ರದ ಟೈಟಲ್ ಟ್ರೈಲರ್ ನೋಡಿ ಶಿವಣ್ಣ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ನಿರ್ದೇಶಕರಾದ ಸಂತು ಹಾಗೂ ಸಿಂಪಲ್ ಸುನಿ ಗರಡಿಯಲ್ಲಿ ಪಳಗಿರುವ ಸಾಫ್ಟ್ವೇರ್ ಇಂಜಿನಿಯರ್ ವೈ ಬಿ ಎನ್ ಸ್ವಾಮಿ, ತಮ್ಮ ಉದ್ಯೋಗಕ್ಕೆ ಗುಡ್ ಬೈ ಹೇಳಿ 'ಧೀರನ್' ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಿರ್ದೇಶಕ ಸ್ವಾಮಿ, ತನ್ನ ಸ್ನೇಹಿತರ ಜೊತೆಗೂಡಿ ಈ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ರಕ್ಷಾ ಶೆಟ್ಟಿ ಅಭಿನಯಿಸಿದ್ದು, ಹಿರಿಯ ನಟರಾದ ಮಿಮಿಕ್ರಿ ದಯಾನಂದ್ ಅಷ್ಟ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ತುಂಬಾ ಅದ್ಭುತವಾಗಿ ಮೂಡಿಬಂದಿದ್ದು, ಖಂಡಿತವಾಗಿಯೂ ಎಲ್ಲರಿಗೂ ಇಷ್ಟವಾಗುತ್ತದೆ. ನಿರ್ದೇಶಕ ಸ್ವಾಮಿ ಚಿತ್ರಕ್ಕಾಗಿ ತುಂಬಾ ಹಾರ್ಡ್ ವರ್ಕ್ ಮಾಡಿದ್ದಾರೆ. ಹೊಸಬರ ಚಿತ್ರಗಳನ್ನು ದಯವಿಟ್ಟು ಹರಸಿ ಹಾರೈಸಿ ಎಂದು ಸಿನಿಪ್ರಿಯರಲ್ಲಿ ಮಿಮಿಕ್ರಿ ದಯಾನಂದ್ ಮನವಿ ಮಾಡಿದರು. ಅಲ್ಲದೆ, ಈ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿದ್ದು, ದಾರಿ ತಪ್ಪುವ ಯುವಕರಿಗೆ ಬುದ್ಧಿಮಾತು ಹೇಳಿ ದಾರಿಗೆ ತರುವ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿದ್ದಾರಂತೆ.
ಇನ್ನು 'ಧೀರನ್' ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳ ಸುತ್ತ ಸುತ್ತುವ ಕಥೆ ಹೊಂದಿದೆ. ಈಗಾಗಲೇ ಸುಮಾರು 30 ದಿನಗಳ ಶೂಟಿಂಗ್ ಮುಗಿಸಿದ್ದು, ಮುಂದಿನ ತಿಂಗಳಿನಿಂದ ಉಳಿದ ಭಾಗವನ್ನು ಶೂಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.