ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕ ಚಂದನ್ ಆಗಿ ಅಭಿನಯಿಸಿದ್ದ ಚಂದು ಗೌಡ ಇದೀಗ ಸಣ್ಣ ಗ್ಯಾಪ್ ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಆದರೆ ಈ ಬಾರಿ ಚಂದು ಗೌಡ ಅವರು ಕಾಣಿಸಿಕೊಳ್ಳುತ್ತಿರುವುದು ನಿರೂಪಕರಾಗಿ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಕುಕ್ಕರಿ ಶೋ ಚಾಟ್ ಕಾರ್ನರ್ ನ ನಿರೂಪಕರಾಗಿ ಚಂದು ಕಾಣಿಸಿಕೊಳ್ಳಲಿದ್ದಾರೆ.
ಇದೇ 31 ರಂದು ಆರಂಭವಾಗಲಿರುವ ಕುಕ್ಕರಿ ಶೋ ಪ್ರತಿ ವಾರಾಂತ್ಯ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿದೆ. ಲಕ್ಷ್ಮಿ ಬಾರಮ್ಮ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಚಂದು ಇದೀಗ ನಿರೂಪಕರಾಗಿ ಮೋಡಿ ಮಾಡಲು ಬರುತ್ತಿದ್ದಾರೆ.
ಜೀ ಕನ್ನಡ ವಾಹಿನಿಯ ಗೃಹ ಲಕ್ಷ್ಮಿ ಧಾರಾವಾಹಿಯ ರಾಘವ್ ಆಗಿ ಕಿರುತೆರೆಗೆ ಕಾಲಿಟ್ಟ ಚಂದು ಅವರಿಗೆ ಬಾಲ್ಯದಿಂದಲೂ ನಟನಾಲೋಕದಲ್ಲಿ ಕಾಣಿಸಿಕೊಳ್ಳುವ ಮಹಾದಾಸೆ ಇತ್ತು. ಬಂದ ಅವಕಾಶವನ್ನು ಒಪ್ಪಿಕೊಂಡ ಚಂದು ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಮುಂದೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದು ಆಗಿ ಮೋಡಿ ಮಾಡಿದ್ದ ಚಂದು ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ.
ತೆಲುಗಿನ ತ್ರಿನಯಿನಿ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿರುವ ಚಂದು ಗೌಡ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಅಟೆಂಪ್ಟ್ ಟು ಮರ್ಡರ್, ಪ್ಲಾಟ್ ನಂ 9 ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿಯೂ ಚಂದು ನಟಿಸಿದ್ದಾರೆ.