'ಮಂಗಳವಾರ ರಜಾದಿನ' ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ಸಿನಿಮಾ. ಬಿಗ್ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯಿಸುತ್ತಿರೋ 'ಮಂಗಳವಾರ ರಜಾದಿನ' ಚಿತ್ರಕ್ಕೆ ಈಗ ಪುನೀತ್ ರಾಜ್‍ಕುಮಾರ್ ಹಾಗೂ ಅಭಿಷೇಕ್ ಅಂಬರೀಶ್ ಸಾಥ್ ಸಿಕ್ಕಿದೆ.
ತಂದೆ ಮತ್ತು ಮಗನ ಬಾಂಧವ್ಯ ಇರುವ ಹಾಡನ್ನು ಪವರ್ ಸ್ಟಾರ್ ಹಾಡಿದ್ದು, ಗಣರಾಜ್ಯೋತ್ಸವದ ದಿನ ಅಭಿಷೇಕ್ ಅಂಬರೀಶ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಹಾಗೇ ಪುನೀತ್ ರಾಜ್‍ಕುಮಾರ್ ಧ್ವನಿಯಲ್ಲಿ ಮೂಡಿ ಬಂದಿರುವ ನೀನೆ ಗುರು, ನೀನೆ ಗುರಿ, ನೀನೆ ಗುರುತು ಎಂಬ ಹಾಡು ಇದಾಗಿದೆ. ಈ ಹಾಡನ್ನು ಗೀತ ರಚನೆಕಾರ ಗೌಸ್ ಫೀರ್ ಬರೆದಿದ್ದು, ಪ್ರಜೋತ್ ಡೇಸಾ ಮ್ಯೂಜಿಕ್ ನೀಡಿದ್ದಾರೆ.
ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಈ ಆಸೆ ಏನಾಗುತ್ತದೆ? ಎನ್ನುವುದೇ ಚಿತ್ರದ ಕಥಾಹಂದರವಂತೆ. ಚಂದನ್ ಆಚಾರ್ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ಮಾಡಿದ್ದು, ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ. ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಯವಿನ್ ನಿರ್ದೇಶಿಸಿದ್ದಾರೆ. ಸ್ಟುಡಿಯೋ 18 ನಿರ್ಮಾಪಕ ಸುಧೀರ್ ಕೆ.ಎಂ. ಈ ಚಿತ್ರವನ್ನು ವೀಕ್ಷಿಸಿ ರಾಜ್ಯಾದ್ಯಂತ ಫೆಬ್ರವರಿ 5ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.