ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇವಲ ತೆರೆ ಮೇಲೆ ಸ್ಟಾರ್ ಅಲ್ಲ, ತೆರೆ ಹಿಂದೆ ಕೂಡಾ ಅವರು ಸ್ಟಾರ್ ಎಂದು ಈಗಾಗಲೇ ಸಾಕಷ್ಟು ಬಾರಿ ಪ್ರೂವ್ ಮಾಡಿ ತೋರಿಸಿದ್ದಾರೆ. ಪ್ರಾಣಿ, ಪಕ್ಷಿಗಳ ಮೇಲಿನ ಅವರ ಪ್ರೀತಿ, ಹಿರಿಯರನ್ನು ಕಂಡರೆ ಗೌರವಿಸುವ ಅವರ ಗುಣ ಎಲ್ಲರಿಗೂ ಇರುವುದಿಲ್ಲ.
ಭಾನುವಾರ ಸಂಜೆ ರಾಜಾಜಿನಗರದ ಒರಾಯನ್ ಮಾಲ್ನಲ್ಲಿ ಸೆಲಬ್ರಿಟಿಗಳಿಗಾಗಿ 'ಕುರುಕ್ಷೇತ್ರ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಶೋಗೆ ಸಾಕಷ್ಟು ಕಲಾವಿದರ ದಂಡೇ ಬಂದಿತ್ತು. ಇನ್ನು ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಕೂಡಾ ಸಿನಿಮಾ ನೋಡಲು ಬಂದಿದ್ದರು. ಗಾಲಿ ಕುರ್ಚಿಯಲ್ಲಿ ಬಂದ ಜಯಂತಿ ನಂತರ ಥಿಯೇಟರ್ ಚೇರ್ನಲ್ಲಿ ಕುಳಿತು ಮೂರು ಗಂಟೆಗಳ ಕಾಲ ಸಿನಿಮಾ ವೀಕ್ಷಿಸಿದರು. ಅವರ ಸಹಾಯಕರು ಕೂಡಾ ಸಿನಿಮಾ ನೋಡುವಲ್ಲಿ ಮಗ್ನರಾದರು. ಆದರೆ ಸಿನಿಮಾ ಮುಗಿದ ನಂತರ ದರ್ಶನ್ ತಾವು ಕುಳಿತಿದ್ದ ಸ್ಥಳದಿಂದ ಎದ್ದು ಬಂದು ಜಯಂತಿ ಅವರನ್ನು ಎತ್ತಿಕೊಂಡು ಅವರ ವ್ಹೀಲ್ ಚೇರ್ ಮೇಲೆ ಸುರಕ್ಷಿತವಾಗಿ ಕುಳ್ಳಿರಿಸಿದರು.
ಹಿರಿಯ ನಟಿಗೆ ದರ್ಶನ್ ತೋರಿದ ಈ ಗೌರವ, ಅನುಕಂಪ ನೋಡಿ ಅಲ್ಲಿದ್ದ ಎಷ್ಟೋ ಸೆಲಬ್ರಿಟಿಗಳು ಮೂಕವಿಸ್ಮಿತರಾದರು. ದರ್ಶನ್ ಎರಡೂ ಕೈಗಳಲ್ಲಿ ಜಯಂತಿ ಅವರನ್ನು ಎತ್ತಿಕೊಂಡು ಬರುವಾಗ ಅಲ್ಲಿದ್ದವರು ಜಾಗ ಕೊಟ್ಟು ದರ್ಶನ್ ಸರಾಗವಾಗಿ ಹೋಗುವಂತೆ ಸಹಕರಿಸಿದರು. ಸೆಲಬ್ರಿಟಿಗಳು ಮಾತ್ರವಲ್ಲ, ದರ್ಶನ್ ಅವರ ಈ ಗುಣಕ್ಕೆ ಅಲ್ಲಿ ಬಂದಿದ್ದ ಸಾಮಾನ್ಯ ಜನರು ಕೂಡಾ ಮೆಚ್ಚುಗೆ ಸೂಚಿಸಿದರು.