ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ‘ಕವಚ‘ ಸಿನಿಮಾ ಏಪ್ರಿಲ್ 5 ರಂದು ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಜಿವಿಆರ್ ವಾಸು ನಿರ್ದೇಶನದ ಈ ಸಿನಿಮಾವನ್ನು ಎಮ್ವಿವಿ ಸತ್ಯನಾರಾಯಣ ನಿರ್ಮಿಸಿದ್ದಾರೆ.
ಇನ್ನು ಮೊನ್ನೆಯಷ್ಟೇ ಚಿತ್ರತಂಡ ಚಿತ್ರದ ಸಕ್ಸಸ್ ಖುಷಿ ಹಂಚಿಕೊಳ್ಳಲು ಪ್ರೆಸ್ ಮೀಟ್ ಏರ್ಪಡಿಸಿತ್ತು. ಈ ವೇಳೆ ಶಿವಣ್ಣ ಕೊಂಚ ಅಸಮಾಧಾನದಿಂದ ಮಾತನಾಡಿದರು. ‘ಕವಚ‘ ಸಿನಿಮಾಗೆ ಟಿವಿ ವಾಹಿನಿಗಳ ಕಡೆಯಿಂದ ಸರಿಯಾದ ಪ್ರಚಾರ ಸಿಗುತ್ತಿಲ್ಲ. ಮುದ್ರಣ ವಾಹಿನಿಗಳು ನೀಡುತ್ತಿರುವ ಪ್ರೋತ್ಸಾಹದಷ್ಟು ವಾಹಿನಿಗಳು ನೀಡುತ್ತಿಲ್ಲ. ನೀವು ಕೇಳಿದಾಗಲೆಲ್ಲಾ ನಾವು ಬೈಟ್ ಕೊಟ್ಟು ಸಹಕರಿಸುತ್ತೇವೆ. ಆದರೆ, ನೀವು ಮಾತ್ರ ನಮ್ಮ ಚಿತ್ರಕ್ಕೆ ಸರಿಯಾದ ಪ್ರಚಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಕವಚ‘ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಒಳ್ಳೆಯ ವಿಮರ್ಶೆ ಬಂದಿರುವ ಸಿನಿಮಾಗಳಿಗೆ ವಾಹಿನಿಗಳ ಪ್ರೋತ್ಸಾಹ ಅಗತ್ಯ. ಇದರ ಬಗ್ಗೆ ದೃಷ್ಟಿ ಹರಿಸಿದರೆ ಕನ್ನಡ ಸಿನಿಮಾಗಳು ಬೆಳೆಯುತ್ತವೆ. ನಾನು ನನ್ನ ಸಿನಿಮಾ ಅಂತ ಹೇಳುತ್ತಿಲ್ಲ. ಎಲ್ಲಾ ಕನ್ನಡ ಸಿನಿಮಾಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳುತ್ತಿದ್ದೇನೆ ನಾನು ಏನಾದರೂ ತಪ್ಪು ಮಾತನಾಡಿದ್ದರೆ ಕ್ಷಮಿಸಿ, ನನ್ನ 33 ವರ್ಷಗಳ ಸಿನಿಮಾ ಕರಿಯರ್ನಲ್ಲಿ ಇಂತಹದ್ದನ್ನು ನೋಡುತ್ತಾ ಬಂದಿದ್ದೇನೆ. ಇನ್ನೂ 50 ವರ್ಷ ಆದರೂ ಈ ರೀತಿಯ ಮನವಿ ನಾನು ಮಾಡುತ್ತಲೇ ಇರುತ್ತೇನೆ ಎಂದು ಶಿವಣ್ಣ ಹೇಳಿದರು.
ಚುನಾವಣೆ ಐದು ವರ್ಷಕ್ಕೆ ಒಮ್ಮೆ ಬರುತ್ತದೆ. ಆದರೆ ನಾವು ವರ್ಷಪೂರ್ತಿ ಸಿನಿಮಾ ಮಾಡುತ್ತಿರುತ್ತೇವೆ. ರಾಜಕೀಯದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆಯೇ ಸಿನಿಮಾಗಳ ಪ್ರಚಾರ ಕೂಡಾ ಮಾಡಿ ಇದರಿಂದ ಕನ್ನಡ ಚಿತ್ರಗಳು ಬೆಳೆಯುತ್ತವೆ ಎಂದು ಶಿವಣ್ಣ ಮನವಿ ಮಾಡಿದರು.