ಬೆಂಗಳೂರು; ಮಲೆಮಹದೇಶ್ವರನ ಬಗ್ಗೆ ರ್‍ಯಾಪ್ ಸಾಂಗ್ ಹಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ರ್‍ಯಾಪರ್ ಚಂದನ್ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಇಂದು ಚಂದನ್ ಶೆಟ್ಟಿ ವಿರುದ್ದ ದೂರು ದಾಖಲಾಗಿತ್ತು. ದೂರುದಾರ ಮಲೆಮಹದೇಶ್ವರ ಭಕ್ತ ಹಾಗೂ ಭಜರಂಗದಳ ಮುಖಂಡನಾಗಿರುವ ತೇಜಶ್ ಗೌಡ ಮಾತನಾಡಿ, ಕೋಲು ಮಂಡೆ ಸಾಂಗ್ ಬಹಳ ವಿವಾದದಿಂದ ಕೂಡಿದೆ. ಈ ಹಿಂದೆ ಶಿವ ಭಂಗಿ ಹೊಡೆಯುತ್ತಿರುವ ಬಗ್ಗೆಯೂ ಚಿತ್ರೀಕರಣ ಮಾಡಿದ್ರು. ಈ ಬಾರಿ ಹಿಂದೂ ದೇವರಿಗೆ ಅವಹೇಳನ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ದೂರು ವಾಪಸ್ಸು ತೆಗೆದುಕೊಳ್ಳಲ್ಲ. ನಾವು ಬೇರೆಯವರ ತರ ಪೊಲೀಸರ ಮೇಲೆ ಹಲ್ಲೆ, ಮಾಧ್ಯಮಗಳ ಮೇಲೆ ಹಲ್ಲೆ ಮಾಡೋದು, ಗಲಭೆ ಮಾಡೋದು ಮಾಡಲ್ಲ. ನಾವು ಕಾನೂನು ಮುಖಾಂತರ ಹೋರಾಟ ಮಾಡ್ತೇವೆ ಅಂದಿದ್ದಾರೆ.
ಇದೇ 22ರಂದು ಕೋಲು ಮಂಡೆ ಮಹಾದೇವ ಸಾಂಗು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ಬಹಳಷ್ಟು ವೈರಲ್ ಆಗಿತ್ತು. ಆದರೆ ಮಲೆ ಮಹಾದೇಶ್ವರ ಭಕ್ತರು ಆಕ್ರೋಶಗೊಂಡು ಕೋಲುಮಂಡೆ ಜಂಗಮ ದೇವರು ಹಾಡನ್ನು ತಿರುಚಲಾಗಿದೆ. ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ ಮತ್ತು ಜಾನಪದ ಹಾಡಿನ ಸೊಗಸನ್ನು ಹಾಳು ಮಾಡಿ ಆಧುನಿಕ ಬಟ್ಟೆ ಧರಿಸಿ ನೃತ್ಯ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.