ಅರ್ಜುನ್ ರೆಡ್ಡಿ ಖ್ಯಾತಿಯ ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಲಾಕ್ಡೌನ್ ನಂತರ ಬಾಕಿ ಇರುವ ಚಿತ್ರೀಕರಣ ನಡೆಯಲಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ, ಪ್ಯಾನ್ ಇಂಡಿಯಾ ಲೆವೆಲ್ನ ಒಂದು ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಬಾಕ್ಸರ್ ಮೈಕ್ ಟೈಸನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ನಲ್ಲಿ ಹಬ್ಬಿದೆ.
ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲೊಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಮೈಕ್ ಟೈಸನ್ ಅವರನ್ನು ಕೇಳಲಾಗಿತ್ತಂತೆ. ಆದರೆ, ಟೈಸನ್ ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲವಂತೆ. ಇದೀಗ ಚಿತ್ರದಲ್ಲಿ ನಟಿಸುವುದಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯದಲ್ಲೇ ಅವರ ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಲೈಗರ್ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದು, ಇದು ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರವೂ ಹೌದು. ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದು, ವಿಜಯ್ ದೇವರಕೊಂಡ ತಾಯಿಯ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಚಿತ್ರತಂಡಕ್ಕೆ ಮೈಕ್ ಟೈಸನ್ ಸೇರ್ಪಡೆಯಾದರೆ, ಇದೊಂದು ಪ್ಯಾನ್ ಇಂಡಿಯಾ ಚಿತ್ರವಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದ ಚಿತ್ರವಾಗಲಿದೆ. ಈ ಚಿತ್ರದ ನಿರ್ಮಾಣದಲ್ಲಿ ಬಾಲಿವುಡ್ನ ಕರಣ್ ಜೋಹರ್ ಸಹ ಕೈಜೋಡಿಸಿದ್ದಾರೆ.