ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗೂ ಕಿರುತೆರೆ ನಟ ಶಿಶಿರ್, ವಿಭಿನ್ನ ಲುಕ್ನಲ್ಲಿ ಮಿಂಚಿರುವ 'ಬಿಲ್ಗೇಟ್ಸ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿಕ್ಕಣ್ಣ ಹಾಗೂ ಶಿಶಿರ್ ಕಾಂಬಿನೇಷನ್ ಮೋಡಿ ಮಾಡಿದ್ದು ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಚಿತ್ರತಂಡ ಇಂದು ಸುದ್ದಿಗೋಷ್ಠಿ ನಡೆಸಿ ಪ್ರೇಕ್ಷಕರಿಗೆ ಹಾಗೂ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸಿದರು. ಕಳೆದ ಎರಡು ತಿಂಗಳಿಂದ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕಳೆದ ವಾರ 9 ಹಾಗೂ ಈ ವಾರ 11 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳ ನಡುವೆಯೂ 'ಬಿಲ್ಗೇಟ್ಸ್' ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಚಿಕ್ಕಣ್ಣನ ಕಾಮಿಡಿ ಕಹಾನಿಗೆ ಸಿನಿಪ್ರಿಯರು ಸೋತಿದ್ದಾರೆ. ಅಲ್ಲದೆ ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೆದ್ದು ಬೀಗಿದೆ.
'ಬಿಲ್ಗೇಟ್ಸ್' ಚಿತ್ರದ ರಿಮೇಕ್ ರೈಟ್ಸ್ ಗೂ ಬೇಡಿಕೆ ಹೆಚ್ಚಿದ್ದು, ಈಗಾಗಲೇ ತಮಿಳಿಗೆ ದೊಡ್ಡ ಮೊತ್ತಕ್ಕೆ ರೀಮೇಕ್ ರೈಟ್ಸ್ ಸೇಲಾಗಿದೆ ಎಂದು ಚಿತ್ರತಂಡ ಹೇಳಿದೆ. 15 ಮಂದಿ ನಿರ್ಮಾಪಕರು ಸೇರಿ ಸುಮಾರು ಮೂರುವರೆ ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರದಲ್ಲಿ ರಶ್ಮಿತಾ ರೋಜ, ಅಕ್ಷರಾ ರೆಡ್ಡಿ, ಕುರಿ ಪ್ರತಾಪ್ ಹಾಗೂ ಇನ್ನಿತರರು ನಟಿಸಿದ್ದಾರೆ.