ಕೋವಿಡ್ ಆರ್ಭಟದ ಕಾರಣ ಅರ್ಧಕ್ಕೆ ಮೊಟಕುಗೊಂಡಿದ್ದ ಬಿಗ್‌ಬಾಸ್ ಸೀಸನ್ 8ರ ಮುಂದುವರಿದ ಭಾಗಕ್ಕೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸ್ಪರ್ಧಿಗಳನ್ನು ವೇದಿಕೆಗೆ ಬರಮಾಡಿಕೊಂಡಿರುವ ಸುದೀಪ್, ಅವರನ್ನು ಮಾತನಾಡಿಸಿ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟರು.
ಬಿಗ್‌ಬಾಸ್ ಕಾರ್ಯಕ್ರಮಕ್ಕೂ ಮುನ್ನ ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಬಿಗ್‌ಬಾಸ್ ಮತ್ತೆ ಪ್ರಾರಂಭವಾಗಿದೆ. ಸ್ಪರ್ಧಿಗಳಿಗೆ ಬ್ರೇಕ್ ಸಿಕ್ಕಿತ್ತು. ಹೊರಗೆ ಹೋಗಿದ್ದರು. ಅವರಿಗೆ ತಮ್ಮ ಜನಪ್ರಿಯತೆ ಗೊತ್ತಾಗಿದೆ. ಹಳೆಯ ಕಂತುಗಳನ್ನು ನೋಡಿದ್ದಾರೆ. ತಮ್ಮ ಬಗ್ಗೆ ಯಾರು ಏನು ಮಾತಾಡಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಈಗ ರೀ ಎಂಟ್ರಿ ಕೊಡುತ್ತಿದ್ದಾರೆ. ಇದು ಹೊಸದಷ್ಟೇ ಅಲ್ಲ, ಇದೇ ಮಜ ಎಂದರು. ಇಂದು ಸಂಜೆ 6ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ನಾಳೆಯಿಂದ ಪ್ರತಿ ರಾತ್ರಿ 9.30ಕ್ಕೆ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನೋಡಬಹುದಾಗಿದೆ.
ಬಿಗ್‌ಬಾಸ್ ಕಾರ್ಯಕ್ರಮವು ಸಾಮಾನ್ಯವಾಗಿ 100 ದಿನಗಳ ಕಾರ್ಯಕ್ರಮವಾಗಿರುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಈ ರಿಯಾಲಿಟಿ ಶೋವನ್ನು ವಿಸ್ತರಿಸಿದ್ದೂ ಇದೆ. ಈ ಬಾರಿ ಲಾಕ್ಡೌನ್ನಿಂದ ಶೋ ಅರ್ಧಕ್ಕೆ ನಿಂತಾಗ, ಸ್ಪರ್ಧಿಗಳು ಮನೆಯಲ್ಲಿ 72 ದಿನಗಳನ್ನು ಕಳೆದಿದ್ದರು. ಇದೀಗ 73ನೇ ದಿನದಿಂದ ಕಾರ್ಯಕ್ರಮ ಮುಂದುವರೆಯಲಿದೆ. ಹಾಗಂತ ಕಾರ್ಯಕ್ರಮ 100ನೇ ದಿನಕ್ಕೆ ಮುಕ್ತಾಯವಾಗುತ್ತಿಲ್ಲ. ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಕನ್ನಡದ ಬಿಗ್‌ಬಾಸ್ ಅಕ್ಟೋಬರ್ನಲ್ಲಿ ಪ್ರಾರಂಭವಾಗಿ ಜನವರಿಯಲ್ಲಿ ಮುಗಿಯುತ್ತಿತ್ತು. ಆದರೆ, ಕೊರೊನಾ ಮತ್ತು ಲಾಕ್ಡೌನ್ನಿಂದ ಎಲ್ಲವೂ ಏರುಪೇರಾಗಿದೆ. ಈ ವರ್ಷ ಎಂಟನೇ ಸೀಸನ್ ಶುರುವಾಗಿರುವುದರಿಂದ ಇನ್ನೊಂದು ಹೊಸ ಸೀಸನ್ ಅಕ್ಟೋಬರ್ನಲ್ಲಿ ಶುರುವಾಗುವ ಸಾಧ್ಯತೆ ಇಲ್ಲ. ಅದಕ್ಕೆ ಇನ್ನೊಂದು ವರ್ಷವಾದರೂ ಬೇಕು. ಹೀಗಿರುವಾಗ ಎಂಟನೇ ಸೀಸನ್ ಇನ್ನಷ್ಟು ವಿಸ್ತರಿಸಿದರೆ ಹೇಗೆ? ಎಂಬ ಯೋಚನೆಯಿಂದ ಈ ಕಾರ್ಯಕ್ರಮವನ್ನು ಆಗಸ್ಟ್ ಮಧ್ಯಭಾಗವರೆಗೂ ಮುಂದುವರೆಸಿಕೊಂಡು ಹೋಗುವ ಯೋಜನೆ ಇದೆಯಂತೆ.
ಈ ಹಿಂದಿನ ಲೆಕ್ಕಾಚಾರದ ಪ್ರಕಾರ, 28 ದಿನಗಳ ಕಾಲ ಕಾರ್ಯಕ್ರಮ ಪ್ರಸಾರವಾಗಬೇಕಿತ್ತು. ಆದರೆ, ಅದನ್ನು 50 ದಿನಗಳಿಗೆ ವಿಸ್ತರಿಸಲಾಗಿದೆ ಎಂಬ ಸುದ್ದಿ ಇದೆ. ಈಗಾಗಲೇ ಮನೆಯಲ್ಲಿ 12 ಸ್ಪರ್ಧಿಗಳು ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಂಚಾರಿ ವಿಜಯ್ಗೆ ಅಂಥ ಯಾವುದೇ ಸಮಸ್ಯೆಗಳಿರಲಿಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಆಪ್ತರು