ಮುಂಬೈ : ಬಿಗ್ ಬಾಸ್ 14ರಲ್ಲಿ ತನ್ನ ಬಾಲ್ಯದಲ್ಲಿ ನಡೆದ ಒಂದು ಕರಾಳ ರಹಸ್ಯವನ್ನು ಬಹಿರಂಗಪಡಿಸಿ ಐಜಾಜ್ ಖಾನ್ ಎಲ್ಲರಿಗೂ ಆಘಾತವನ್ನುಂಟು ಮಾಡಿದ್ರು.
ಚಿಕ್ಕವನಿರುವಾಗ ತನ್ನ ಮನೆಗೆಲಸದವನು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ, ಅನುಚಿತವಾಗಿ ಸ್ಪರ್ಶಿಸಿದ್ದ ಎಂದು ಚಿಕ್ಕ ವಯಸ್ಸಿನಲ್ಲಿ ನಡೆದ ಕೆಟ್ಟ ಘಟನೆಯೊಂದನ್ನು ಐಜಾಜ್ ಹಂಚಿಕೊಂಡಿದ್ದಾರೆ. ವೆಬ್ ಸಿರೀಸ್ ಚಿತ್ರೀಕರಣಕ್ಕೆಂದು ಸದ್ಯ ಮನೆಯಿಂದ ಹೊರಗಿರುವ ಐಜಾಜ್ ಯಾರಿಗೂ ತಿಳಿದಿಲ್ಲದ ವೈಯಕ್ತಿಕ ವಿಷಯವನ್ನು ಬಹಿರಂಗಪಡಿಸಬೇಕಾಯಿತು ಎಂದಿದ್ದಾರೆ.
ಬಾಲ್ಯದಲ್ಲಿರುವಾಗ ಅನುಚಿತವಾಗಿ ನನ್ನನ್ನು ಸ್ಪರ್ಶಿಸಲಾಗಿತ್ತು. ಆ ಘಟನೆಯಿಂದ ಮನಸ್ಸು ಘಾಸಿಕೊಂಡು, ಅದರಿಂದ ಹೊರ ಬರಲು ವರ್ಷಗಳ ಕಾಲ ಹೆಣಗಾಡಬೇಕಾಯ್ತು ಎಂದು ಐಜಾಜ್ ಹೇಳಿಕೊಂಡಿದ್ದಾರೆ. ಈ ನೋವಿನಿಂದ ಹೊರ ಬರಲು ಒಬ್ಬ ಥೆರಪಿಸ್ಟ್ ನನಗೆ ಸಹಾಯ ಮಾಡಿದ್ರು ಎಂದು ತಿಳಿಸಿದ್ದಾರೆ. ಈ ಬಗ್ಗೆ ನನ್ನ ತಂದೆಗೆ ಸಹ ಹೇಳಿಕೊಳ್ಳಲಾಗಲಿಲ್ಲ ಎಂದು ಅವರು ವಿಷಾದಿಸಿದ್ದಾರೆ.
ಪ್ರಸ್ತುತ ತಮ್ಮ ವೆಬ್-ಸರಣಿ 'ಸಿಟಿ ಆಫ್ ಡ್ರೀಮ್ಸ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಈ ನಟ, ಈ ಕಾರ್ಯಕ್ರಮದಲ್ಲಿ ತನ್ನ ಮನವನ್ನು ಚಿಕ್ಕಂದಿನಲ್ಲಿಯೇ ಘಾಸಿಗೊಳಿಸಿದ ಕರಾಳ ರಹಸ್ಯವನ್ನು ಹಂಚಿಕೊಂಡಿದ್ದು, ನಾನು ಇದನ್ನ ಏಕೆ ಈಗ ಹೇಳಿಕೊಳ್ಳುತ್ತಿದ್ದೇನೆ ಎಂದರೆ , ಅದು ಸತ್ಯ. ನನ್ನ ರಹಸ್ಯವನ್ನು ಹಂಚಿಕೊಳ್ಳಲು ನಾನು ಈ ಕ್ಷಣವನ್ನೇ ಏಕೆ ಆರಿಸಿಕೊಂಡೆನೆಂದರೆ ಇದು ದೊಡ್ಡ ರಿಯಾಲಿಟಿ ಶೋ.
ಇಲ್ಲಿ ಮಕ್ಕಳು ಇದ್ದಾರೆ ಎಂದುಕೊಳ್ಳುತ್ತೇನೆ. ಅವರ ಬಾಳಿನಲ್ಲೂ ಇಂಥ ದುರ್ಘಟನೆಗಳು ನಡೆದಿರಬಹುದು. ಈಗ ನಾನು ಹೇಳಿದ ಮಾತುಗಳಿಂದ ಅವರು ಸ್ಫೂರ್ತಿ ಪಡೆಯುತ್ತಾರೆ ಮತ್ತು ಅಂತಹ ಕರಾಳ ಘಟನೆಗಳೇನಾದ್ರೂ ನಡೆದಿದ್ದರೆ ಅದರಿಂದ ಹೊರ ಬರುತ್ತಾರೆ. ಅವರು ಚಿಕಿತ್ಸೆಗೆ ಒಳಗಾಗಲೂ ಸಹಾಯವಾಗುತ್ತದೆ ಎಂದು ಐಜಾಜ್ ಖಾನ್ ಹೇಳಿದ್ದಾರೆ.