ಬಿಗ್ ಬಾಸ್ ಕನ್ನಡದ 8ನೇ ಸೀಸನ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇಂದು ಮತ್ತು ನಾಳೆ (ಶನಿವಾರ ಮತ್ತು ಭಾನುವಾರ) ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ನಾಳೆ ರಾತ್ರಿ ಬಿಗ್ಬಾಸ್ನ ವಿನ್ನರ್ ಯಾರು ಎಂಬುದು ಬಹಿರಂಗವಾಗಲಿದೆ.
ಈ ಬಾರಿ ಬಿಗ್ಬಾಸ್ನಲ್ಲಿ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಈ ವಿಷಯದಲ್ಲಿ ಬೆಟ್ಟಿಂಗ್ ಸಹ ನಡೆಯುತ್ತಿದೆ. ವೈಷ್ಣವಿ, ಅರವಿಂದ್ ಮತ್ತು ಮಂಜು ಪಾವಗಡ ನಡುವೆ ತೀವ್ರ ಪೈಪೋಟಿ ಇದ್ದು, ಅದರಲ್ಲೂ ಟಾಪ್ 2 ಪಟ್ಟಿಯಲ್ಲಿ ಅರವಿಂದ್ ಮತ್ತು ಮಂಜು ಉಳಿಯಬಹುದು ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಕುತೂಹಲದಿಂದ ಬಿಗ್ಬಾಸ್ ವೀಕ್ಷಕರ ಸಂಖ್ಯೆ ಹೆಚ್ಚಿದ್ದು, ಕಳೆದ ಕೆಲವು ವಾರಗಳಲ್ಲಿ ಕಾರ್ಯಕ್ರಮದ ಟಿಆರ್ಪಿ ಕ್ರಮೇಣ ಹೆಚ್ಚಿದೆ. ಪ್ರತೀ ವಾರ 3 ಅಥವಾ 3.5 ಟಿಆರ್ಪಿ ರೇಟಿಂಗ್ ಬಂದರೆ ಅದು ಹೆಚ್ಚು ಎಂದು ಹೇಳಲಾಗುತ್ತಿತ್ತು. ಬಿಗ್ಬಾಸ್ನಂತಹ ದೊಡ್ಡ ಕಾರ್ಯಕ್ರಮಕ್ಕೆ, ಇದು ಏನೇನೂ ಅಲ್ಲ ಎನ್ನುವ ಪರಿಸ್ಥಿತಿ ಇತ್ತು. ಏಕೆಂದರೆ, ಬಿಗ್ಬಾಸ್ನ ಬಜೆಟ್ ಸಹ ಬಹಳ ದೊಡ್ಡದು.
ಮನೆಯಲ್ಲಿರುವುದು ಕೆಲವೇ ಸ್ಪರ್ಧಿಗಳಾದರೂ ಈ ಕಾರ್ಯಕ್ರಮಕ್ಕೆ ನೂರಾರು ಜನ ಹಗಲಿರುಳು ಕೆಲಸ ಮಾಡುತ್ತಿರುತ್ತಾರೆ. ಈ ಕಾರ್ಯಕ್ರಮಕ್ಕೆ ಹಾಕುವ ಬಜೆಟ್, ಶ್ರಮ ಎಲ್ಲವನ್ನೂ ಹೋಲಿಸಿದರೆ, ಟಿಆರ್ಪಿ ಏನೇನೂ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗ ಟಿಆರ್ಪಿಯಲ್ಲಿ ತುಸು ಏರಿಕೆಯಾಗಿದೆ. ಕಳೆದ ವಾರ ಬಿಗ್ಬಾಸ್ಗೆ 4.7 ರೇಟಿಂಗ್ ಬಂದಿದೆಯಂತೆ.
ಬರೀ ಬಿಗ್ಬಾಸ್ ಅಷ್ಟೇ ಅಲ್ಲ, ಒಟ್ಟಾರೆ ಕಲರ್ಸ್ ಕನ್ನಡದ ಟಿಆರ್ಪಿ ಗಣನೀಯವಾಗಿ ಏರಿದೆ. ಕಳೆದ ಮೂರು ವರ್ಷಗಳಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಲರ್ಸ್ ಕನ್ನಡದ ಟಿಆರ್ಪಿ ಸ್ವಲ್ಪ ಏರಿದ್ದು, ಅದರಲ್ಲೂ ಸೃಜನ್ ಲೋಕೇಶ್ ಮತ್ತು ತಾರಾ ತೀರ್ಪುಗಾರರಾಗಿರುವ ರಾಜ-ರಾಣಿ ಕಾರ್ಯಕ್ರಮಕ್ಕೆ 6.5 ಟಿಆರ್ಪಿ ಬಂದಿದ್ದು, ಇತ್ತೀಚಿನ ವರ್ಷಗಳಲ್ಲೇ ಕಲರ್ಸ್ ಕನ್ನಡದ ರಿಯಾಲಿಟಿ ಶೋವೊಂದಕ್ಕೆ ಇಷ್ಟೊಂದು ರೇಟಿಂಗ್ ಬಂದಿದೆ ಎಂದು ಹೇಳಲಾಗುತ್ತಿದೆ.
ಬಿಗ್ಬಾಸ್ ಟಿಆರ್ಪಿ ಸಹ ಸುಧಾರಿಸಿದೆ. ಮುಂದಿನ ವಾರದಿಂದ ಪ್ರಾರಂಭವಾಗುವ ಎದೆತುಂಬಿ ಹಾಡುವೆನು ಕಾರ್ಯಕ್ರಮದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಿದ್ದು, ಅದರ ಟಿಆರ್ಪಿ ಸಹ ಕನಿಷ್ಠ 7ರಿಂದ ಶುರುವಾಗಬಹುದು ಎಂದು ಹೇಳಲಾಗುತ್ತಿದೆ.