ಪ್ರಥಮ ನಿರ್ದೇಶನದ ಸಲಗ ಚಿತ್ರದ ಮೂಲಕ ಜನ ಮನ ಗೆದ್ದಿರುವ ದುನಿಯಾ ವಿಜಯ್, ತಮ್ಮ ನಿರ್ದೇಶನದಲ್ಲಿ ಎರಡನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ನೈಜ ಘಟನೆ ಆಧಾರಿತ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಭೀಮ ಎಂದು ಹೆಸರಿಡಲಾಗಿದೆ. ದುನಿಯಾ ವಿಜಯ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದ್ರೊಂದಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರ ದುನಿಯಾ ವಿಜಯ್ ನಟನೆಯ 28ನೇ ಸಿನಿಮಾ ಆಗಿದೆ. ವಿಜಯ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ತೀರ್ಮಾನ ಮಾಡಿದ್ದಾರೆ. ವಿಜಯ್ ಈ ಬಾರಿ ಯುವ ಜನಾಂಗದ ಸಮಸ್ಯೆ, ಕುಟುಂಬದಲ್ಲಿ ಉಂಟಾಗುವ ತೊಡಕುಗಳು, ಸಾಮಾಜಿಕವಾಗಿ ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ಗಳನ್ನು ಇಟ್ಟುಕೊಂಡು ಕಥೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಕರುನಾಡ ಚಕ್ರವರ್ತಿ ಶಿವ ರಾಜಕುಮಾರ್ ಅಭಿನಯದ ಭೈರಾಗಿ ಚಿತ್ರವನ್ನು ನಿರ್ಮಿಸತ್ತಿರುವ ಕೃಷ್ಣ ಸಾರ್ಥಕ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಲಗ ಚಿತ್ರದ ವಿತರಕ ಜಗದೀಶ್ ಗೌಡ ಅವರು ಸಹ ಕೃಷ್ಣ ಸಾರ್ಥಕ್ ಅವರೊಂದಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ: ಎನ್.ಎಂ ಸುರೇಶ್
ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ. ಇತ್ತೀಚೆಗಷ್ಟೇ ಭೀಮ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೋಸ್ಟರ್ ನೋಡಿದ್ರೆ ಇದು ರೌಡಿಸಂ ಆಧಾರಿತ ಸಿನಿಮಾ ಎನಿಸುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.