ಹಿಂದಿನ ದಿನಗಳಲ್ಲಿ ಬಾಲ್ಯ ವಿವಾಹ ಎಂಬುದು ದೊಡ್ಡ ಪಿಡುಗಾಗಿತ್ತು. ಈ ಸಾಮಾಜಿಕ ಪಿಡುಗು ದೇಶದ ಎಷ್ಟೋ ಗ್ರಾಮಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಇದನ್ನೂ ಸಂಪೂರ್ಣ ತೊಡೆದುಹಾಕಲು ಇಂದಿಗೂ ಸಾಧ್ಯವಾಗಿಲ್ಲ.
'ಬಾಲ್ಯ ವಿವಾಹ' ಹಾಗೂ ಹೆಣ್ಣುಮಕ್ಕಳ ಶೋಷಣೆಯ ಕಥಾಹಂದರ ಹೊಂದಿರುವ 'ಭಾಗ್ಯಶ್ರೀ' ಎಂಬ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ತಯಾರಾಗಿದ್ದು ಈ ಸಿನಿಮಾ ಬಿಡುಗಡೆಗೆ ರೆಡಿ ಇದೆ. ನವೆಂಬರ್ 15ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಎಸ್. ಮಲ್ಲೇಶ್ ನಿರ್ದೇಶನದ 'ಭಾಗ್ಯಶ್ರಿ' ಚಿತ್ರವನ್ನು ಅವರೇ ಬರೆದಿರುವ 'ಭಾಗ್ಯ' ಎಂಬ ಕಿರು ಕಾದಂಬರಿಯಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ. ಬಡವರ ಮನೆಯಲ್ಲಿ ಜನಿಸುವ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ, ಬಾಲ್ಯವಿವಾಹ ಪಿಡುಗಿನ ಕಾರಣದಿಂದಾಗಿ ಅವರು ಎದುರಿಸುವ ದೌರ್ಜನ್ಯವನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನಕ್ಕೆ ಎಸ್. ಮಲ್ಲೇಶ್ ಕೈ ಹಾಕಿದ್ದಾರೆ. ನವೆಂಬರ್ 15 ಕ್ಕೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮೊದಲು ಬಿಡುಗಡೆ ಮಾಡಿ, ನಂತರ ಬೆಂಗಳೂರು ಹಾಗೂ ಇತರೆ ಭಾಗಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಚಿತ್ರದಲ್ಲಿ 'ಭಾಗ್ಯಶ್ರೀ' ಪಾತ್ರದಲ್ಲಿ ಬಾಲನಟಿ ಹೀರಾ ನಟಿಸಿದ್ದಾರೆ. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಿಗೆ ದೊಡ್ಡರಂಗೇಗೌಡ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರವನ್ನು ನಾವು ಹಣ ಮಾಡುವ ಉದ್ದೇಶದಿಂದ ಮಾಡಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಮ್ಮದು. ಎಲ್ಲರೂ ಬಂದು ನಮ್ಮಚಿತ್ರ ನೋಡಿ ಎಂದು ಚಿತ್ರದ ನಿರ್ಮಾಪಕಿ ಆಶಾ ಶಾಹಿರ ಬಿಳಗಿ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ಶಾಲಾಮಕ್ಕಳಿಗೆ ವಿಶೇಷ ಪ್ರದರ್ಶನ ಏರ್ಪಡಿಸುವ ಅಲೋಚನೆಯಲ್ಲಿದೆ ಚಿತ್ರತಂಡ.