ಮಂಗಳೂರು: ಇನ್ನಷ್ಟೇ ತೆರೆ ಕಾಣಬೇಕಿದ್ದ 'ಮುಂಬೈ ಟು ಭಟ್ಕಳ' ಸಿನಿಮಾದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ದೇಶಪ್ರೇಮದ ಕಥಾ ಹಂದರವಿರುವ 'ಮುಂಬೈ ಟು ಭಟ್ಕಳ' ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಎರಡು ದಿನದ ಶೂಟಿಂಗ್ ಬಾಕಿ ಇದೆ. ಆದರೆ ಈ ಬಗ್ಗೆ ಕೆಲವರು 'ಲವ್ ಜಿಹಾದ್' ಕಥೆಯುಳ್ಳ ಸಿನಿಮಾ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ನಟಿಸಿದ ಓರ್ವ ಹಿಂದೂ ನಟಿಗೆ ಬುರ್ಖಾ ತೊಡಿಸಲಾಗಿದೆ ಎಂದು ಹೇಳಲಾಗಿದೆ.
ಆದರೆ ಈ ಸಿನಿಮಾದಲ್ಲಿ ಬುರ್ಖಾ ತೊಟ್ಟದ್ದು ಕ್ರಿಶ್ಚಿಯನ್ ನಟಿ. ಹಿಂದೂ ನಟಿಗೆ ಪೊಲೀಸ್ ಪಾತ್ರ ನೀಡಲಾಗಿದೆ. ಅಲ್ಲದೇ ಆಕೆಯದ್ದು ಹಿಂದೂ ಧರ್ಮದ ಪಾತ್ರವೇ ಆಗಿದೆ. ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆಯವರ ತೇಜೋವಧೆ ಮಾಡಬೇಕು, ಹಿಂದೂ ಸಂಘಟನೆಗಳ ವಿರುದ್ಧ ಎತ್ತಿಕಟ್ಟಬೇಕು ಎಂದು ಈ ರೀತಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ನಾವು ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಪೊಲೀಸ್ ಇಲಾಖೆಯೂ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.