ಮಮತಾ ರಾಹುತ್, ಕನ್ನಡ ಸಿನಿಮಾ ಮಾತ್ರವಲ್ಲ ಟಾಲಿವುಡ್ನಲ್ಲೂ ಕೂಡಾ ಹೆಸರು ಮಾಡಿರುವ ಬೆಂಗಳೂರಿನ ಹುಡುಗಿ. ನಿರೂಪಕಿಯಾಗಿ ಕರಿಯರ್ ಆರಂಭಿಸಿ ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸಿ ಇದೀಗ ನಾಯಕಿಯಾಗಿ ಮಿಂಚುತ್ತಿರುವ ಗ್ಲಾಮರ್ ಡಾಲ್.
ಮಮತಾ ಸದ್ಯಕ್ಕೆ ತೆಲುಗಿನ ಶಿವನಾಗಿಣಿ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮೆಂದಮ್ ಶ್ರೀಧರ್ ನಿರ್ದೇಶನದ ಸಿನಿಮಾದಲ್ಲಿ ಮಮತಾ ರಾಹುತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರ ಕೂಡಾ ಹೌದು. ಮಮತಾ ಈ ಸಿನಿಮಾದಲ್ಲಿ 2 ಶೇಡ್ಗಳಲ್ಲಿ ನಟಿಸಿದ್ದಾರೆ. ನಾಗಿಣಿ ಹಾಗೂ ಭೂಲೋಕದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಮತಾ, ನಾನು ನಿಜಜೀವನದಲ್ಲಿ ಶಿವಭಕ್ತೆ. ನನಗೆ ಈ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತದ್ದು ನಿಜಕ್ಕೂ ನನ್ನ ಪುಣ್ಯ ಎನ್ನುತ್ತಾರೆ. ನಾಗಲೋಕದ ನಾಗಿಣಿ ಭೂಲೋಕಕ್ಕೆ ಏಕೆ ಬರುತ್ತಾಳೆ. ಆಕೆ ಭೂಲೋಕದಲ್ಲಿ ಉಳಿಯಲು, ಹಗೆ ತೀರಿಸಿಕೊಳ್ಳಲು ಯಾರೆಲ್ಲಾ ಸಹಾಯ ಮಾಡುತ್ತಾರೆ. ತನ್ನ ಕೆಲಸ ಮುಗಿದ ಬಳಿಕ ಭೂಲೋಕದಲ್ಲೇ ಉಳಿಯುತ್ತಾಳಾ ಅಥವಾ ಮತ್ತೆ ನಾಗಲೋಕಕ್ಕೆ ವಾಪಸ್ ಹೋಗುತ್ತಾಳೆಯೇ ಎಂಬುದು ಚಿತ್ರದ ಕಥೆ. ಈ ಸಿನಿಮಾಗೆ ಸುಮಾರು 250 ಮಂದಿ ಹೀರೋಯಿನ್ ಆಡಿಷನ್ನಲ್ಲಿ ಭಾಗವಹಿಸಿದ್ದು ಕೊನೆಗೆ ಮಮತಾ ಆಯ್ಕೆಯಾಗಿದ್ದಾರೆ. ಈ ಪಾತ್ರಕ್ಕೆ ಆಕೆ ಹೇಳಿಮಾಡಿಸಿದಂತಿದಾರೆ ಎಂದು ನಿರ್ದೇಶಕ ಶ್ರೀಧರ್ ಹೇಳುತ್ತಾರೆ.
ಚಿತ್ರದಲ್ಲಿ ಮಮತಾ ಆ್ಯಕ್ಷನ್ ಕೂಡಾ ಮಾಡಿದ್ದಾರೆ. ಮಲ್ಲೇಶ್ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಮೈಥಲಾಜಿಕಲ್, ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್, ಲವ್ ಎಲ್ಲಾ ಅಂಶಗಳಿರುವ ಸಿನಿಮಾವನ್ನು ಸಂಧ್ಯವಲ್ಲಿ ಮೂವಿ ಮೇಕರ್ ಬ್ಯಾನರ್ ಅಡಿ ಹರಿಬಾಬು, ಶ್ರೀಧರ್ ಪೂವಲ, ಕರುಣ ಎಂಬ ಮೂವರು ನಿರ್ಮಾಪಕರು ನಿರ್ಮಿಸಿದ್ದಾರೆ. ಹೈದರಾಬಾದ್, ವಿಶಾಖಪಟ್ಟಣ, ಜೈಪುರ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಜರುಗುತ್ತಿದೆ. ಈಗಾಗಲೇ 4ಶೆಡ್ಯೂಲ್ ಶೂಟಿಂಗ್ ಮುಗಿದಿದ್ದು ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇದು ಮಮತಾ ಅವರ 8ನೇ ತೆಲುಗು ಸಿನಿಮಾ. ಕಾಲಿಂಗ್ ಬೆಲ್ ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟ ಮಮತಾಗೆ ಶಿವನಾಗಿಣಿ ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾವಂತೆ. ಚಿತ್ರದಲ್ಲಿ ಮಮತಾ ತಂದೆ ಪಾತ್ರದಲ್ಲಿ ತೆಲುಗಿನ ಖ್ಯಾತ ನಟ ಸುಮನ್ ಅಭಿನಯಿಸಿದ್ದಾರೆ. ಇವರೊಂದಿಗೆ ಶಿಯಾಜಿ ಸಿಂಧೆ, ಅಜಯ್ ಘೋಷ್, ಮುಖ್ತಾರ್ ಖಾನ್, ನೂತನ್ ನಾಯ್ಡು, ಹರಿಬಾಬು, ರಾಜ್ಕಾಂತ್, ಸುರೇಶ್, ಗೋಪಿನಾಥ್, ಮಧುಲಗ್ನದಾಸ್, ಶುಭಾಂಗಿ ಸಿನಿಮಾದಲ್ಲಿ ನಟಿಸಿದ್ದಾರೆ.