ವರನಟ ಡಾ. ರಾಜ್ಕುಮಾರ್ ಹಾಗೂ ಭಾರತಿ ಅಭಿನಯದ ‘ಬಂಗಾರದ ಮನುಷ್ಯ’ಸಿನಿಮಾ 48 ವರ್ಷಗಳನ್ನು ಪೂರೈಸಿದೆ. ಚರಿತ್ರೆ ಸೃಷ್ಟಿಸೊ ಅವತಾರ ಎಂಬ ಹಾಡಿನಂತೆ ಈ ಸಿನಿಮಾ ಅಂದಿನ ಕಾಲದಲ್ಲೇ ಚರಿತ್ರೆ ಸೃಷ್ಟಿಸಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ. ಈ ಸಿನಿಮಾ 31 ಮಾರ್ಚ್ 1972 ರಲ್ಲಿ ಬಿಡುಗಡೆಯಾಗಿತ್ತು.
ಸಿನಿಮಾ ಬಿಡುಗಡೆಯಾದ ನಂತರ ಸುಮಾರು 2 ವರ್ಷಗಳ ಕಾಲ ನಗರದ ಕೆಂಪೇಗೌಡ ರಸ್ತೆಯ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು. ಟಿ.ಕೆ. ರಾಮರಾವ್ ಅವರ ಕಥೆ ಆಧರಿಸಿದ ಈ ಸಿನಿಮಾ ಸ್ಯಾಂಡಲ್ವುಡ್ ಇತಿಹಾದಲ್ಲೇ ನೆನಪಿನಲ್ಲಿಟ್ಟುಕೊಳ್ಳಬೇಕಾದಂತ ಬಂಗಾರದ ಚಿತ್ರ. ಚಿತ್ರವನ್ನು ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ನಿರ್ದೇಶಿಸಿದ್ದಾರೆ. ಕಂಠೀರವ ಸ್ಟುಡಿಯೋ ಬ್ಯಾನರ್ ಅಡಿ ಆರ್. ಲಕ್ಷ್ಮಣ್ ಗೋಪಾಲ್ ಈ ಸಿನಿಮಾನ್ನು ನಿರ್ಮಿಸಿದ್ದಾರೆ. ಇದು ನಿಮಾಪಕರಿಗೆ ಭಾರೀ ಲಾಭ ತಂದುಕೊಟ್ಟಂತ ಸಿನಿಮಾ ಕೂಡಾ. ಸಿನಿಮಾ ಬಿಡುಗಡೆಯಾಗಿ 48 ವರ್ಷಗಳು ಕಳೆದ ಹಿನ್ನೆಲೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಅಣ್ಣಾವ್ರು ಯುವರೈತ ರಾಜೀವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕೊನೆಯ ದೃಶ್ಯದಲ್ಲಿ ಡಾ. ರಾಜ್ಕುಮಾರ್ ಊಟದ ತಟ್ಟೆಯಲ್ಲಿ ಅನ್ನವನ್ನು ಬಿಟ್ಟು ಒಬ್ಬರೇ ಅನಾಥರಂತೆ ಹೊರಟುಬಿಡುತ್ತಾರೆ. ಪ್ರೀಮಿಯರ್ ಶೋನಲ್ಲಿ ಈ ದೃಶ್ಯಕ್ಕೆ ಟೀಕೆ ಎದುರಾಗಿತ್ತು. ಅಭಿಮಾನಿಗಳು ಅಣ್ಣಾವ್ರನ್ನು ಹೀಗೆ ನೋಡಲು ಇಷ್ಟಪಡುವುದಿಲ್ಲ. ದೃಶ್ಯವನ್ನು ಬದಲಿಸಬೇಕು, ಇಲ್ಲವಾದಲ್ಲಿ ಸಿನಿಮಾ ಸೋಲುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಸ್ವತ: ಡಾ. ರಾಜ್ಕುಮಾರ್ ಈ ದೃಶ್ಯ ಬದಲಿಸಲು ಒಪ್ಪಲಿಲ್ಲ. ಕಥೆ ಬಯಸಿದಂತೆ ದೃಶ್ಯಗಳು ಇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.
ಸಿನಿಮಾ ಬಿಡುಗಡೆಯಾದಾಗ ಇದರ ಪ್ರಭಾವ ಎಷ್ಟಿತ್ತೆಂದರೆ ಅನೇಕರು ಕೃಷಿಗೆ ಆದ್ಯತೆ ನೀಡಿ ನಗರ ಬಿಟ್ಟು ಹಳ್ಳಿಗೆ ವಾಪಸ್ ಬಂದರು. ಚಿತ್ರದ ಎಲ್ಲಾ ಹಾಡುಗಳು ಕೇಳಲು ಇಂಪಾಗಿದ್ದು ‘ಆಗದು ಎಂದು ಕೈಕಟ್ಟಿ ಕುಳಿತರೆ‘ ಹಾಡು ಸೋಮಾರಿಗಳಿಗೆ ಪಾಠ ಕಲಿಸುತ್ತದೆ. ‘ಹನಿ ಹನಿಗೂಡಿದರೆ ಹಳ್ಳ‘ ಎಂಬ ಸಾಮೂಹಿಕ ಗೀತೆಯಲ್ಲಿ ಹಳ್ಳಿಯ ಬದುಕನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಚಿತ್ರದ ಹಾಡುಗಳಿಗೆ ಜಿ.ಕೆ. ವೆಂಕಟೇಶ್ ಸಂಗೀತ ನೀಡಿದ್ದಾರೆ. ಡಾ, ರಾಜ್ಕುಮಾರ್ ಹಾಗೂ ಭಾರತಿ ಅವರ ಜೋಡಿ ಅಂದಿನ ಕಾಲಕ್ಕೆ ಸೂಪರ್ ಜೋಡಿ ಎನ್ನಿಸಿತ್ತು. ಡಾ ರಾಜ್ಕುಮಾರ್ ಜೊತೆ ಭಾರತಿ, ಆರತಿ, ಆದಿವಾನಿ ಲಕ್ಷ್ಮೀದೇವಿ, ಲೋಕನಾಥ್, ಬಾಲಕೃಷ್ಣ, ವಜ್ರಮುನಿ, ದ್ವಾರಕೀಶ್. ಶ್ರೀನಾಥ್ ಹಾಗೂ ಇತರರು ಅಭಿನಯಿಸಿದ್ಧಾರೆ.