ಚಿತ್ರ ಬಿಡುಗಡೆ ಆಗಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಕ್ಷಮೆ ಕೇಳಲು ಚಿತ್ರತಂಡ ಸುದ್ದಿಗೋಷ್ಟಿ ಏರ್ಪಡಿಸಿತ್ತು. ಚಿತ್ರವನ್ನು ಖಂಡಿತ ಇದೇ ತಿಂಗಳು ಬಿಡುಗಡೆ ಮಾಡುವುದಾಗಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದರು. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಹೆಚ್ಚು ಇದೆ. ಅಲ್ಲದೆ ಇದುವರೆಗೂ ನಮಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದ ಕಾರಣ ಚಿತ್ರದ ಬಿಡುಗಡೆ ದಿನಾಂಕವನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕಲಾಗಿದೆ. ದಯವಿಟ್ಟು ಯಾರೂ ನಿರಾಶರಾಗಬೇಡಿ ಎಂದು ಚಿತ್ರತಂಡ ಮನವಿ ಮಾಡಿದೆ.
ಕನ್ನಡ ರಾಜ್ಯೋತ್ಸವದಂದು 'ಆಯುಷ್ಮಾನ್ ಭವ' ಚಿತ್ರದ ಬಿಡುಗಡೆ ಸಂಭ್ರಮವನ್ನು ಜಾತ್ರೆ ರೀತಿ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದರು. ನಮ್ಮ ಚಿತ್ರವನ್ನು ರಾಜ್ಯೋತ್ಸವದಂದು ಬಿಡುಗಡೆ ಮಾಡುತ್ತಿರುವ ಭಾಗ್ಯ ಸಿಕ್ಕಿತ್ತು. ಆದ್ರೆ ಕೆಲ ತಾಂತ್ರಿಕ ಕಾರಣಗಳಿಂದ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದಕ್ಕೆ ನಮಗೂ ಬೇಸರವಾಗಿದೆ. ಆದರೆ ನವೆಂಬರ್ 2ನೇ ವಾರದಲ್ಲಿ ಖಂಡಿತ ಸಿನಿಮಾ ಬಿಡುಗಡೆ ಆಗಲಿದೆ. ಇಲ್ಲಿವರೆಗೂ ನಮ್ಮ ಮೇಲೆ ತೋರಿಸಿದ ಪ್ರೀತಿ ಇದೇ ರೀತಿ ಮುಂದುವರೆಯಲಿ ಎಂದು ಹಿರಿಯ ನಟ ಅನಂತ್ನಾಗ್ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಚಿತ್ರದಲ್ಲಿ ಸುಮಾರು 4-5 ನಿಮಿಷಗಳಿಗೂ ಹೆಚ್ಚು ಕಾಲ ಪ್ರಾಣಿಗಳ ಗ್ರಾಫಿಕ್ಸ್ ಇದ್ದು, ಅದರ ಮೇಕಿಂಗ್ ವಿಡಿಯೋ ನೋಡಿ ನಂತರ ಸರ್ಟಿಫಿಕೇಟ್ ಕೊಡುವುದಾಗಿ ಸೆನ್ಸಾರ್ ಮಂಡಳಿ ಹೇಳಿದ ಕಾರಣ ಚಿತ್ರದ ಬಿಡುಗಡೆಗೆ ತೊಂದರೆ ಆಯಿತು. ಸದ್ಯಕ್ಕೆ ಎಲ್ಲಾ ಕೆಲಸ ಮುಗಿಸಿದ್ದೇವೆ. ಸೆನ್ಸಾರ್ ಸರ್ಟಿಫಿಕೇಟ್ ಬಂದ ಕೂಡಲೇ ಬಿಡುಗಡೆ ದಿನಾಂಕ ಘೋಷಿಸುವುದಾಗಿ ನಿರ್ದೇಶಕ ಪಿ. ವಾಸು ಹೇಳಿದರು.
ನಂತರ ಮಾತನಾಡಿದ ನಿರ್ಮಾಪಕ ಯೋಗೀಶ್ ದ್ವಾರಕೀಶ್, ಸದ್ಯ 'ಆಯುಷ್ಮಾನ್ ಭವ' ಚಿತ್ರ ಸೆನ್ಸಾರ್ ಅಂಗಳದಲ್ಲಿದ್ದು, 4-5 ದಿನಗಳಲ್ಲಿ ಸರ್ಟಿಫಿಕೇಟ್ ಸಿಗುವ ಸಾಧ್ಯತೆಯಿದೆ. ನವೆಂಬರ್ 15 ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.