ಮೊದಲು 'ಅಯೋಗ್ಯ' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಮೋಹನ್ ಕುಮಾರ್ ಚಿತ್ರದ ಬಜೆಟ್ ಹೆಚ್ಚಾದ ಕಾರಣ ಚಿತ್ರತಂಡದಿಂದ ಹೊರಬಂದಿದ್ದರು. ಆದರೆ ಚಿತ್ರಕ್ಕಾಗಿ ನಾನು ನೀಡಿದ್ದ ಬಂಡವಾಳದಲ್ಲಿ ಇನ್ನೂ 10 ಲಕ್ಷ ರೂಪಾಯಿ ಬಾಕಿ ಹಣವನ್ನು ಚಿತ್ರದ ನಿರ್ದೇಶಕ ಮಹೇಶ್ ನನಗೆ ವಾಪಸ್ ನೀಡಿಲ್ಲ ಎಂದು ಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಆರೋಪಕ್ಕೆ 'ಅಯೋಗ್ಯ' ನಿರ್ದೇಶಕ ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ನನಗೂ ಮೋಹನ್ ಕುಮಾರ್ ಅವರಿಗೂ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. 'ಅಯೋಗ್ಯ' ಚಿತ್ರವನ್ನು ಪೂರ್ಣಗೊಳಿಸಲು ನಮ್ಮಿಂದ ಆಗುವುದಿಲ್ಲ ಎಂದು ಹೇಳಿದಾಗ ವಾಣಿಜ್ಯ ಮಂಡಳಿ ಮುಖಾಂತರ ಚಿತ್ರದ ಹಳೆ ನಿರ್ಮಾಪಕರಾದ ಸುರೇಶ್ ಅವರಿಗೆ 35 ಲಕ್ಷ ರೂಪಾಯಿಯನ್ನು ಸೆಟ್ಲ್ ಮಾಡಿದ್ದೇವೆ. ಹೀಗಾಗಿ ಕಾರ್ಯಕಾರಿ ನಿರ್ಮಾಪಕರಾಗಿದ್ದ ಮೋಹನ್ ಕುಮಾರ್ ಅವರು ಏನೇ ಹಣಕಾಸಿನ ವ್ಯವಹಾರ ಇದ್ದರೂ ನಿರ್ಮಾಪಕರಾದ ಸುರೇಶ್ ಅವರ ಬಳಿ ಮಾತನಾಡಿಕೊಳ್ಳಬೇಕು. ಅವರ 10 ಲಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
ಸಿನಿಮಾ ಸಕ್ಸಸ್ ಆಗಿದ್ದು, 100 ದಿನಗಳನ್ನು ಪೂರೈಸಿದೆ. ಇಲ್ಲಿಯವರೆಗೂ ಏನೂ ಮಾತನಾಡದ ಅವರು, ಈಗ ಇಲ್ಲಸಲ್ಲದ ಆರೋಪ ಮಾಡಲು ಕಾರಣವೇನು. ಎಲ್ಲದಕ್ಕೂ ನಮ್ಮ ಬಳಿ ಸಾಕ್ಷಿ ಇದೆ. ಸಿನಿಮಾ ಮಾಡಲಾಗುವುದಿಲ್ಲ ಎಂದು ಅವರು ಕಳಿಸಿದ ಮೆಸೇಜ್ಗಳೂ ಇನ್ನೂ ನಮ್ಮ ಬಳಿ ಇದೆ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.