ಸ್ವೀಟಿ, ಅಲಿಯಾಸ್ ಅನುಷ್ಕಾ ಶೆಟ್ಟಿ ಟಾಲಿವುಡ್ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದ ಮಂಗಳೂರಿನ ಹುಡುಗಿ. 'ಸೂಪರ್' ಚಿತ್ರದ ಮೂಲಕ ಕರಿಯರ್ ಆರಂಭಿಸಿ ಅರುಂಧತಿ, ಭಾಗಮತಿ, ರುದ್ರಮದೇವಿ, ಬಾಹುಬಲಿ ಸೇರಿ ಅನೇಕ ಹಿಟ್ ಸಿನಿಮಾಗಳನ್ನು ಅನುಷ್ಕಾ ನೀಡಿದ್ದಾರೆ.
ಇನ್ನು ಸಿನಿಮಾ ಎಂದ ಮೇಲೆ ಅಲ್ಲಿ ನಾನಾ ರೀತಿಯ ಪಾತ್ರಗಳಿರುತ್ತವೆ. ಅದರಲ್ಲಿ ಕೆಲವೊಂದು ಸಾಹಸ ದೃಶ್ಯಗಳನ್ನು ಕೂಡಾ ಮಾಡಬೇಕಿರುತ್ತದೆ. ಇದಕ್ಕೆ ಕೆಲವೊಮ್ಮೆ ಡ್ಯೂಪ್ಗಳನ್ನು ಬಳಸಿದರೆ ಮತ್ತೆ ಕೆಲವೊಮ್ಮೆ ನಾಯಕ-ನಾಯಕಿಯರೇ ಈ ಪಾತ್ರ ಮಾಡಬೇಕಿರುತ್ತದೆ. ಈ ಆ್ಯಕ್ಷನ್ ದೃಶ್ಯಗಳ ಬಗ್ಗೆ ಮಾತನಾಡಿರುವ ಅನುಷ್ಕಾ ಶೆಟ್ಟಿ, ಅರುಂಧತಿ, ಬಾಹುಬಲಿ, ಭಾಗಮತಿ ಚಿತ್ರಗಳಿಗಾಗಿ ಕತ್ತಿ ವರಸೆ ಕಲಿತುಕೊಂಡೆ. ಕುದುರೆ ಸವಾರಿ ಕೂಡಾ ಮಾಡಿದ್ದೇನೆ. ಆದರೆ ಅದು ನನಗೆ ಕಷ್ಟ ಎನ್ನಿಸಲಿಲ್ಲ. ಆದರೆ ನನ್ನ ಜೀವನದ ಅತಿ ದೊಡ್ಡ ಸಾಹಸ ಎಂದರೆ 'ಬಿಲ್ಲಾ' ಚಿತ್ರ ನೆನಪಾಗುತ್ತದೆ.
'ಬಿಲ್ಲಾ' ಚಿತ್ರದಲ್ಲಿ ಬಹಳ ಎತ್ತರದಿಂದ ಧುಮುಕುವ ಸನ್ನಿವೇಶವಿದೆ. ಈ ದೃಶ್ಯ ಮಾಡಲು ನಾನು ಬಹಳ ಕಷ್ಟಪಡಬೇಕಾಯ್ತು. ಏಕೆಂದರೆ ನನಗೆ ಎತ್ತರದ ಸ್ಥಳಗಳಿಗೆ ಹೋದರೆ ತಲೆ ತಿರುಗುತ್ತದೆ. ಆದರೆ ಈ ದೃಶ್ಯವನ್ನು ನಾನು ಮಾಡಲೇಬೇಕಾಯ್ತು. ಬಹಳ ಕಷ್ಟ ಪಟ್ಟು ಕೊನೆಗೂ ಆ ದೃಶ್ಯವನ್ನು ಮಾಡಿದೆ. ಇದು ನಿಜಕ್ಕೂ ನನ್ನ ಜೀವನದ ಬಹಳ ದೊಡ್ಡ ಸಾಹಸ. ಆದರೆ ನನಗೆ ಇನ್ನೂ ಭಯ ಕಡಿಮೆ ಆಗಿಲ್ಲ. ಆದ್ದರಿಂದ ಅಂತಹ ಸಾಹಸವನ್ನು ಬೇರೆ ಚಿತ್ರಗಳಲ್ಲಿ ಮಾಡುವ ಪ್ರಯತ್ನ ಮಾಡಲಿಲ್ಲ. ಎತ್ತರದ ಸ್ಥಳಗಳಿಗೆ ಹೋದರೆ ನನ್ನ ಪ್ರಾಣ ಹೋದಂತೆ ಅನ್ನಿಸುತ್ತದೆ ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ.