ಗಾಂಧಿನಗರ ಅಂದಾಕ್ಷಣ ಸಿನಿಮಾ ಪ್ರಿಯರಿಗೆ ಕಪಾಲಿ, ಸಾಗರ್, ಮೆಜೆಸ್ಟಿಕ್, ತ್ರಿಭುವನ್, ತ್ರಿವೇಣಿ, ಅನುಪಮ, ಸಂತೋಷ್, ನರ್ತಕಿ ಹೀಗೆ ಹಲವು ಚಿತ್ರಮಂದಿಗಳು ನೆನಪಾಗುತ್ತವೆ. ಈಗಾಗಲೇ ಕಪಾಲಿ, ಸಾಗರ್, ಮೆಜೆಸ್ಟಿಕ್ ಹಾಗೂ ತ್ರಿಭುವನ್ ಚಿತ್ರಮಂದಿರಗಳನ್ನ ಕೆಡವಿ ಮಾಲ್ಗಳನ್ನ ನಿರ್ಮಾಣ ಮಾಡಲಾಗಿದೆ.
ಈಗಾಗಲೇ ಗಾಂಧಿನಗರದಲ್ಲಿರುವ ಚಿತ್ರಮಂದಿಗಳ ಅವನತಿ ಅಂಚಿನಲ್ಲಿ ಇರಬೇಕಾದ್ರೆ, ಕೊರೊನಾ ಸಂದರ್ಭದಲ್ಲಿ ಅನುಪಮ ಚಿತ್ರಮಂದಿರ ಹೈಟೆಕ್ನಾಲಜಿಯಿಂದ ನವೀಕರಣಗೊಂಡಿದೆ.
ಎಪ್ಪತ್ತರ ದಶಕದಲ್ಲಿ ಅಪರ್ಣ ಚಿತ್ರಮಂದರ ಅಂದ್ರೆ, ಯುವ ನಟನಿಂದ ಹಿಡಿದು ಸ್ಟಾರ್ ನಟರವರೆಗೂ ಈ ಚಿತ್ರಮಂದಿರದಲ್ಲಿ, ತಮ್ಮ ಸಿನಿಮಾ ರಿಲೀಸ್ ಮಾಡುವ ಕಾಲವಿತ್ತು. ಯಾಕೆಂದರೆ, ನಿತ್ಯ 30 ಲಕ್ಷ ಜನ ಓಡಾಡುವ ಮೆಜೆಸ್ಟಿಕ್ ಪಕ್ಕದಲ್ಲೇ ಈ ಅಪರ್ಣ ಚಿತ್ರಮಂದಿರ ಇದ್ದ ಕಾರಣ, ಆ ಕಾಲದಲ್ಲಿ ಈ ಚಿತ್ರಮಂದಿರಕ್ಕೆ ಬೇಡಿಕೆ ಇತ್ತು.
ಇನ್ನು, ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಕಾಶೀನಾಥ್, ಶಿವರಾಜ್ ಕುಮಾರ್ ಹೀಗೆ ಕನ್ನಡ ಹಾಗೂ ಹಿಂದಿಯ ದೊಡ್ಡ ದೊಡ್ಡ ನಟರ ಸಿನಿಮಾಗಳು ನೂರು ದಿನ ಪೂರೈಯಿಸಿರುವ ದಾಖಲೆ ಇದೆ. ಅದ್ರಲ್ಲಿ ಡಾ ರಾಜ್ ಕುಮಾರ್ ಅಭಿನಯದ, ಸಮಯದ ಗೊಂಬೆ, ಅನುರಾಗ ಅರಳಿತು, ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಚಿತ್ರ ಯಜಮಾನ, ಬಂಧನ, ಕಾಶೀನಾಥ್ ಅಭಿನಯದ ಅವಳೇ ನನ್ನ ಹೆಂಡತಿ, ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ಈ ಅಪರ್ಣ ಚಿತ್ರಮಂದಿರದಲ್ಲಿ ನೂರು ದಿನ ಕಂಪ್ಲೀಟ್ ಮಾಡಿರುವ ಖ್ಯಾತಿ ಇದೆ.
ಇದರ ಜೊತೆಗೆ ಅನುಪಮ ಚಿತ್ರಮಂದಿರದ ಮಾಲೀಕರಾದ ಎಂ. ಎಸ್ ಮಲ್ಲಪ್ಪ ಹೇಳುವ ಹಾಗೇ, 1975 ಏಪ್ರಿಲ್ ತಿಂಗಳಲ್ಲಿ ಅಪರ್ಣ ಎಂಬ ಹೆಸರಿನಲ್ಲಿ ಈ ಚಿತ್ರಮಂದಿರವನ್ನ, ಸ್ನೇಹಿತರ ಸಹಯೋಗದಲ್ಲಿ ಶುರು ಮಾಡಿದ್ರಂತೆ. ಆದರೆ, 2009ರಲ್ಲಿ ಸ್ನೇಹಿತರು ಈ ಚಿತ್ರಮಂದಿರ ನಡೆಸೋದಿಕ್ಕೆ ಹಿಂದೇಟು ಹಾಕಿದಾಗ, ಆಗ ಮಲ್ಲಪ್ಪನವರು ಸಂಪೂರ್ಣವಾಗಿ, ಇದರ ಜವಾಬ್ದಾರಿ ತೆಗೆದುಕೊಂಡು, ಅಪರ್ಣ ಎಂಬ ಹೆಸರಲ್ಲಿ ಪ್ರಖ್ಯಾತಿ ಹೊಂದಿದ್ದ ಈ ಚಿತ್ರಮಂದಿರ ಹೆಸರು ಬದಲಾವಣೆ ಮಾಡಿಕೊಳ್ಳುವ ಮೂಲಕ ಅನುಪಮ ಅಂತಾ ಹೊಸ ಹೆಸರಿನೊಂದಿಗೆ ಶುರು ಮಾಡಿದರು.
2009 ರಿಂದ ಹಿಡಿದು ಕೊರೊನಾ ಬರುವುದಕ್ಕಿಂತ ಮುಂಚೆ, ಹಲವಾರು ಸಿನಿಮಾಗಳು ಪ್ರದರ್ಶನ ಆಗುತ್ತಿದ್ವು. ಈ ಅನುಪಮ ಚಿತ್ರಮಂದಿರದಲ್ಲಿ ನೂರು ದಿನ ಪೂರೈಸಿದ ಕೊನೆಯ ಸಿನಿಮಾ ಅಂದರೆ ಅದು ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಅನ್ನೋದು ಮಾಲೀಕರ ಮಾತು.
ಹೀಗೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳು, ಈ ಅನುಪಮ ಚಿತ್ರಮಂದಿರದಲ್ಲಿ ಶತದಿನ ಕಂಡಿವೆ. 44 ವರ್ಷದಲ್ಲಿ ಬರೋಬ್ಬರಿ 5000 ಕ್ಕೂ ಹೆಚ್ಚು ಸಿನಿಮಾಗಳು ಈ ಅನುಪಮ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದೆ ಅಂತಾರೆ ಈ ಚಿತ್ರಮಂದಿರದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಮೃತ್ಯುಂಜಯ.
ಇಷ್ಟೆಲ್ಲ ಇತಿಹಾಸ ಇರುವ ಅನುಪಮ ಚಿತ್ರಮಂದಿರ, ಈಗ ಹೊಸ ರೂಪ ಪಡೆದುಕೊಂಡಿದೆ. ಈ ಅನುಪಮ ಚಿತ್ರಮಂದಿರದ ಮಾಲೀಕರು ಲಕ್ಷ ಲಕ್ಷ ಖರ್ಚು ಮಾಡಿ ಕಂಪ್ಲೀಟ್ ಅನುಪಮ ಚಿತ್ರಮಂದಿರವನ್ನ ಹೈಟೆಕ್ ಮಾಡಿದ್ದಾರೆ. ಈ ಮೊದಲು ಅನುಪಮ ಚಿತ್ರಮಂದಿರದ ಗಾಂಧಿಕ್ಲಾಸ್ 700 ಸೀಟುಗಳನ್ನ ಹೊಂದಿತ್ತು.
ಈಗ 400ಕ್ಕೆ ಇಳಿಸಿ, ಹೊಸ ಸೀಟ್ಗಳನ್ನ ಹಾಕಲಾಗಿದೆ. ಅದೇ ರೀತಿಯ ಬಾಲ್ಕನಿಯಲ್ಲಿ, ಮಲ್ಟಿಪ್ಲೆಕ್ಸ್ ತರಹ ಮೆಟ್ಟಿಲುಗಳಿಗೆ ಲೈಟ್ ಸಿಸ್ಟಮ್, ಪ್ರೇಕ್ಷಕರು ಆರಾಮವಾಗಿ ಕುಳಿತುಕೊಳ್ಳುವ ಸೀಟ್ ಜೊತೆಗೆ 7.1 ಹೈಟೆಕ್ನಾಜಿ ಹೊಂದಿಗೆ ಸೌಂಡಿಂಗ್ ಸಿಸ್ಟಮ್ ಹಾಕಲಾಗಿದೆ. ಇದರ ಜೊತೆಗೆ ಉತ್ತಮ ಗುಣಮಟ್ಟದ ಸ್ಕ್ರೀನಿಂಗ್ ಹಾಕಲಾಗಿದ್ದು, ಹಳೆಯ ಅನುಪಮ ಚಿತ್ರಮಂದಿರ ಈಗ ಮಲ್ಟಿಪ್ಲೆಕ್ಸ್ ರೂಪ ಪಡೆದುಕೊಂಡಿದೆ.