ಕಿರುತೆರೆಯಲ್ಲಿ ಆರ್ಯವರ್ಧನ್ ಆಗಿ ದೊಡ್ಡ ಅಭಿಮಾನಿ ಬಳಗವನ್ನು ಪಡೆದಿರುವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸದ್ಯ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ದೊಡ್ಡ ಕಾರಣವೇ ಈ ಪುಟ್ಟ ದೇವತೆಯಂತೆ... ಅದು ಬೇರಾರೂ ಅಲ್ಲ, ಅನಿರುದ್ಧ್ ಅವರ ಮುದ್ದಿನ ಮಗಳು ಶ್ಲೋಕ. ಅಂದ ಹಾಗೆ ಭಾನುವಾರ ಹುಟ್ಟುಹಬ್ಬವನ್ನು ಆಚರಿಸಿದ ತಮ್ಮ ಮುದ್ದಿನ ಪುತ್ರಿ ಶ್ಲೋಕಗೆ ಅನಿರುದ್ಧ್ ತುಂಬು ಹೃದಯದಿಂದ ಶುಭಾಶಯ ಕೋರಿದ್ದಾರೆ.
''ನನ್ನ ತಾಯಿಯ ಮಮತೆ, ನನ್ನ ದೇವತೆಯ ಪ್ರತಿರೂಪದ ಪ್ರತಿಮೆ ನೀನು, ಭಾರತಿ ಅಮ್ಮನ ಅಂಗೈಯಲ್ಲಿ ಆಡಿ ಬೆಳೆದ ನಿನ್ನಲ್ಲಿ ಅವರ ಗುಣಗಳನ್ನು ನೋಡಿರುವೆ. ನಿನ್ನನ್ನು ಎತ್ತಿ ಮುದ್ದಾಡಿದ ಹೃದಯವಂತನ ಆ ಸವಿ ನೆನಪು ಸದಾ ಮೆಲಕು ಹಾಕುತ್ತಿರುವೆ. ನೀನು ಹುಟ್ಟಿದ ಆ ದಿನ ಕಣ್ಣಂಚಲ್ಲಿ ನೀರು ಹೇಳದೇ ಕೇಳದೆ ತುಂಬಿ ಬಂದಾಗ
ನನಗರಿವಾಗದೇ ನನ್ನೊಳಗೆ ಅಪ್ಪ ಎಂಬ ಹೊಸ ಅನುಭವ ಎರಡನೇ ಬಾರಿ ಆದ ಆ ಸುಂದರ ಕ್ಷಣಕ್ಕೆ ನೀನೆ ಕಾರಣ. ನನ್ನ ಜೀವನದ ಅತ್ಯದ್ಭುತ ಉಡುಗೊರೆಯಾಗಿ ನಿನ್ನನ್ನು ಕೊಟ್ಟ ನನ್ನ
ದೇವತೆಗೆ ನನ್ನ ಪ್ರೀತಿಯ ಧನ್ಯವಾದ" ಎಂದು ಅನಿರುದ್ಧ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಮನೆಯ ಯುವರಾಣಿ, ನನ್ನ ಮನದ ಮಹಾರಾಣಿ ಶ್ಲೋಕ.. ಹುಟ್ಟು ಹಬ್ಬದ ಶುಭಾಶಯಗಳು ಕಂದ''.. ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಮಗಳ ಮೇಲಿರಲಿ ಎಂದು ಬಹಳ ಸುಂದರವಾಗಿ ಬರೆದುಕೊಂಡಿದ್ದಾರೆ.

