ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೆ ಹೊಸಬರ ಪ್ರಯತ್ನಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಸಬರು ಪರಿಶುದ್ಧ ಪ್ರೀತಿ, ಪ್ರೇಮದ ಕಥೆಗಳನ್ನು ಮಾಡಿ ಗೆಲ್ಲುವ ದಾರಿಯನ್ನು ಹುಡುಕುತ್ತಿದ್ದಾರೆ. ಇದೀಗ 'ಅಂದವಾದ' ಟೈಟಲ್ ಇಟ್ಟುಕೊಂಡು ಹೊಸಬರ ಚಿತ್ರತಂಡವೊಂದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ.
ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿರುವ 'ಅಂದವಾದ' ಸಿನಿಮಾ ಟ್ರೇಲರನ್ನು ನಿರ್ದೇಶಕ ಸಿಂಪಲ್ ಸುನಿ ಬಿಡುಗಡೆ ಮಾಡಿದರು. ಈ ಚಿತ್ರದ ಟ್ರೇಲರ್ ಅನಾವರಣ ಮಾಡಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕ ಬಿ. ಛಲ ಹಚ್ಚ ಹಸಿರಿನ ಜೊತೆಗೆ ಮಳೆ ಹಾಗೂ ಮಂಜಿನ ಜೊತೆಯಲ್ಲಿ ಮುದ್ದಾದ ಪ್ರೇಮ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಹೊರಟ್ಟಿದ್ದಾರೆ. ಮಾಧ್ಯಮವೊಂದರಲ್ಲಿ ಪ್ರಸಾರವಾದ ಸುದ್ದಿಯೊಂದು ಈ ಚಿತ್ರಕ್ಕೆ ಸ್ಫೂರ್ತಿ ಅನ್ನೋದು ನಿರ್ದೇಶಕರ ಮಾತು.
ನಿರ್ದೇಶಕ ಛಲ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಿರಣ್ ಕುಮಾರ್ ಜೈ ಈ ಚಿತ್ರದ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅನುಷಾ ರಂಗನಾಥ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹರೀಶ್ ಸೊಂಡೆಕೊಪ್ಪ ಛಾಯಾಗ್ರಹಣ, ವಿಕ್ರಂ ವರ್ಮನ್ ಸಂಗೀತ ನಿರ್ದೇಶನ ಇದೆ. ಸಕಲೇಶಪುರ, ಕೊಡಚಾದ್ರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಇನ್ನು ಇಂದು ನಿರ್ದೇಶಕ ಸಿಂಪಲ್ ಸುನಿ ಹುಟ್ಟುಹಬ್ಬವಾಗಿದ್ದು ಟ್ರೇಲರ್ ಬಿಡುಗಡೆ ಮಾಡಿದ ಸಿಂಪಲ್ ಸುನಿ ಬರ್ತಡೇಯನ್ನು ಚಿತ್ರತಂಡ ಆಚರಿಸಿತು. ಇದು ಸಿಂಪಲ್ ಸುನಿಗೆ ನಿಜಕ್ಕೂ ಸರ್ಪ್ರೈಸ್ ಆಗಿತ್ತು.