ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್ ಯು' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಗೆದ್ದಿರುವುದಕ್ಕೆ ಉಪೇಂದ್ರ, ನಿರ್ದೇಶಕ ಚಂದ್ರು ಸೇರಿ ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ.
ಜ್ಯೋತಿಷಿ ಆನಂದ್ ಗುರೂಜಿ ಕೂಡಾ ಉಪೇಂದ್ರ ಮನೆಗೆ ಭೇಟಿ ನೀಡಿ ಉಪೇಂದ್ರ ಹಾಗೂ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಉಪೇಂದ್ರ ನಿವಾಸಕ್ಕೆ ಭೇಟಿ ನೀಡಿದ್ದ ಆನಂದ್ ಗುರೂಜಿ ಉಪೇಂದ್ರ ಅವರಿಗೆ ಹೂವಿನ ಹಾರ ಹಾಕಿ ಆಶೀರ್ವದಿಸಿದ್ದಾರೆ. ಈ ಸಿನಿಮಾದಿಂದ ದೊಡ್ಡ ಯಶಸ್ಸು ನಿಮಗೆ ಲಭಿಸಲಿದೆ. ಶ್ರೀನಿವಾಸ ಮೆಚ್ಚಿ ನಿಮ್ಮನ್ನ ಹರಸುತ್ತಾನೆ ಎಂದು ಹಾರೈಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಆರ್. ಚಂದ್ರು ಕೂಡಾ ಹಾಜರಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆನಂದ್ ಗುರೂಜಿ, ಉಪೇಂದ್ರ ಹಾಗೂ ಆರ್. ಚಂದ್ರು ಮಾತುಕತೆ ನಡೆಸಿದರು. ಗುರೂಜಿ ಮನೆವರೆಗೂ ಬಂದು ನಮ್ಮನ್ನು ಹರಸಿರುವುದು ನಮಗೆ ಮತ್ತಷ್ಟು ಖುಷಿ ನೀಡಿದೆ ಎಂದು ಉಪೇಂದ್ರ ಹಾಗೂ ಆರ್. ಚಂದ್ರು ಸಂತೋಷ ವ್ಯಕ್ತಪಡಿಸಿದ್ದಾರೆ.