13ನೇ ಶತಮಾನದಲ್ಲಿ ಜನ್ನ ಕವಿ ಬರೆದಿದ್ದ 'ಯಶೋಧರ ಚರಿತೆ' ಕಾವ್ಯವನ್ನು ಆದರಿಸಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ 'ಅಮೃತಮತಿ' ಎಂಬ ಚಿತ್ರ ಮಾಡಿದ್ದು, ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ.
ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್‌ಕುಮಾರ್ ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಮೃತಮತಿ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಗಾಯಕಿ ಸವಿತಾ ಮಲ್ನಾಡ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಲ್ಲದೆ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಗೆದ್ದಿದ್ದ ಕಾಸಿಂ ಅಮೃತಮತಿ ಚಿತ್ರದಲ್ಲಿ ಹಾಡುವ ಮೂಲಕ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ.
ಅಮೃತಮತಿ ಚಿತ್ರ ಜನ್ನ ಕಾವ್ಯಾಧಾರಿತ ಚಿತ್ರವಾಗಿದ್ದು, ಅಮೃತಮತಿಯಾಗಿ ಚಿಕ್ಕಮಗಳೂರು ಚೆಲ್ವಿ ಹರಿಪ್ರಿಯಾ ನಟಿಸಿದ್ದಾರೆ. ಯುವರಾಜ ಯಶೋಧರನ ಪತ್ನಿ ಅಮೃತಮತಿ ಅಷ್ಟಾವಂಕನ ಪ್ರೀತಿಯಲ್ಲಿ ಬೀಳುತ್ತಾಳೆ. ಈ ಎಳೆಯನ್ನು ತೆಗೆದುಕೊಂಡು ಬರಗೂರು ರಾಮಚಂದ್ರಪ್ಪ 'ಅಮೃತಮತಿ' ಚಿತ್ರ ಮಾಡಿದ್ದಾರೆ.
ಯುವರಾಜ ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ನಟಿಸಿದ್ದರೆ, ಅಷ್ಟಾವಂಕನ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ.