ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಡಲಿದ್ದಾರೆ ಅಮಿತಾ ಕುಲಾಲ್.
ಸೃಜನ್ ಲೋಕೇಶ್ ಅಭಿನಯದ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಹಾರಿದ ಅಮಿತಾ ಮುಂದೆ ಗಿಫ್ಟ್ ಬಾಕ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಪುಟ್ಟಕ್ಕನ ಮಗಳಾಗಿ ಮೊದಲ ಬಾರಿಗೆ ಕಿರುತೆರೆಗೆ ಕಾಲಿಡಲಿರುವ ಅಮಿತಾ ಕುಲಾಲ್ ತುಂಬಾ ಖುಷಿಯಲ್ಲಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ "ಈಗಾಗಲೇ ನಾನು ಒಂದಷ್ಟು ಸೀರಿಯಲ್ ಗಳ ಆಡಿಷನ್ ನಲ್ಲಿ ಭಾಗವಹಿಸಿದ್ದೇನೆ. ನನ್ನ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಇದೀಗ ದೊರೆತಿದೆ. ಒಂದು ಉತ್ತಮ ಪಾತ್ರದ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದೇನೆ ಎಂದು ನನಗೆ ತುಂಬಾ ಸಂತಸವಾಗುತ್ತಿದೆ. ಇನ್ನು ಈ ಪಾತ್ರ ಜೀವನದಲ್ಲಿ ಹೋರಾಟ ಮಾಡಿ ಸಾಧನೆ ಮಾಡುವ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿರಲಿದೆ " ಎಂದು ಹೇಳಿದ್ದಾರೆ ಅಮಿತಾ ಕುಲಾಲ್.
"ಈ ಧಾರಾವಾಹಿಯಲ್ಲಿ ನಾನು ಪುಟ್ಟಕ್ಕನ ಎರಡನೇ ಮಗಳಾಗಿ ನಟಿಸಲಿದ್ದೇನೆ. ಆಕೆ ತುಂಬಾ ಓದುವ ಹುಡುಗಿ, ಜೊತೆಗೆ ಯುಪಿಎಸ್ಸಿ ಪರೀಕ್ಷೆ ಬರೆಯಲು ಬಯಸುತ್ತಾಳೆ. ಐಎಎಸ್ ಅಧಿಕಾರಿಯಾಗಬೇಕುವ ಹಂಬಲವಿರುವ ಆಕೆ ಜಗತ್ತಿನಲ್ಲಿ ಮಹಿಳೆಯರೂ ಪುರುಷರಿಗಿಂತ ಕಡಿಮೆಯೇನಿಲ್ಲ ಎಂದು ತೋರಿಸಿಕೊಡಬೇಕು ಎಂಬ ಹಂಬಲ ಆಕೆಗಿರುತ್ತದೆ" ಎಂದಿದ್ದಾರೆ.